ತೆರಿಗೆ ದೇಶದ ಅಭಿವೃದ್ಧಿಗೆ ಬಳಕೆ ಆಗುತ್ತದೆ : ಅವ್ವಾರು ಮಂಜುನಾಥ

ತೆರಿಗೆ ದೇಶದ ಅಭಿವೃದ್ಧಿಗೆ ಬಳಕೆ ಆಗುತ್ತದೆ : ಅವ್ವಾರು ಮಂಜುನಾಥ Taxes will be used for the development of the country: Avvaru Manjunatha

ಬಳ್ಳಾರಿ 14: ಸರ್ಕಾರ ಸಂಗ್ರಹ ಮಾಡುವ ತೆರಿಗೆಯು ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಳಕೆ ಆಗಲಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ ಅವರು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆಯ ಬಳ್ಳಾರಿ ಕಚೇರಿಯು ವ್ಯಾಪಾರಿಗಳು ಮತ್ತು ವಾಣಿಜ್ಯೋದ್ಯಮಿಗಳ ಜೊತೆ ಶುಕ್ರವಾರ ನಡೆಸಿದ ‘ಓಟ್ ರೀಚ್‌’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಾ ರೀತಿಯ ತೆರಿಗೆಗಳು ದೇಶದ ಆರ್ಥಿಕ ಸಂಪನ್ಮೂಲಗಳು.

ದೇಶದ ಆರ್ಥಿಕ ಭವಿಷ್ಯವನ್ನು ನಿರ್ಧರಿಸುವಲ್ಲಿ - ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ತೆರಿಗೆಯನ್ನು ದೇಶದ ಭದ್ರತೆ, ಅಭಿವೃದ್ಧಿ, ವಿಜ್ಞಾನ, ಆರೋಗ್ಯ, ಶಿಕ್ಷಣ, ಆಡಳಿತ, ರಸ್ತೆ, ಕೃಷಿ, ಕೈಗಾರಿಕೋದ್ಯಮ, ಮೂಲಭೂತ ಸೌಲಭ್ಯಗಳು ಹೀಗೇ ಹತ್ತಾರು ಕ್ಷೇತ್ರಗಳಲ್ಲಿ ವಿನಿಯೋಗ ಆಗುತ್ತಿವೆ ಎಂದರು. ಆದರೆ, ಆದಾಯ ತೆರಿಗೆಯ ಹೊಸ ಕಾಯ್ದೆಗಳು, ನೀತಿಗಳು - ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ಜ್ಞಾನದ ಅಗತ್ಯವಿದೆ. ಈ ಕ್ಷೇತ್ರದ ಪರಿಣಿತರ ಜೊತೆಯಲ್ಲಿ ಚರ್ಚೆ ನಡೆಸಿ ಆದಾಯ ತೆರಿಗೆಯ ಸಮಗ್ರ ಮಾಹಿತಿ ಪಡೆದು, ಸಮಸ್ಯೆಗಳಿಗೆ ಪರಿಹಾರ ಪಡೆದಲ್ಲಿ ನೆಮ್ಮದಿ ಸಿಗಲಿದೆ ಎಂದರು.

ಬಳ್ಳಾರಿಯ ಆದಾಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮೀಷನರ್ ಆಫ್ ಇನ್ಕಂಟ್ಯಾಕ್ಸ್‌ ಶಿವಶಂಕರ್ ಅವರು, ಆದಾಯ ತೆರಿಗೆ ಪಾವತಿ ಇಲಾಖೆಯಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿ (ಏಐ) ಬಳಕೆ ಮಾಡಲಾಗುತ್ತಿದೆ. ತೆರಿಗೆ ಪಾವತಿಯ ಕುರಿತು ಎಲೆಕ್ಟ್ರಾನಿಕ್ ಸಂವಹನ (ಇ-ಮೇಲ್) ಬಳಕೆ ಆಗುತ್ತಿದೆ. ತೆರಿಗೆ ಪಾವತಿದಾರರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. ಆದಾಯ ತೆರಿಗೆ ಅಧಿಕಾರಿ ಸತ್ಯನಾರಾಯಣ ಅವರು, ಆದಾಯ ತೆರಿಗೆ ಇಲಾಖೆಯ ಹೊಸ ಕಾಯ್ದೆಗಳು, ನಿಯಮಗಳು - ನೀತಿಗಳನ್ನು ವಿವರಿಸಿ, ಇಲಾಖೆಯ ಸೌಲಭ್ಯಗಳನ್ನು - ರಿಯಾಯಿತಿಗಳು, ಇನ್ನಿತರೆಗಳನ್ನು ವಿವರಿಸಿ, ಸಭೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಎಸ್‌. ದೊಡ್ಡನಗೌಡ, ಡಾ. ಮರ್ಚೆಡ್ ಮಲ್ಲಿಕಾರ್ಜುನ ಗೌಡ, ಅನಂತುಲ ಸುಧಾಕರ,

ಜಿ. ರಾಘವೇಂದ್ರ ರೆಡ್ಡಿ, ಎಚ್‌. ಮಹಾರುದ್ರಗೌಡ, ಕೃಷ್ಣಕಾಂತ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ತೆರಿಗೆ ಕಮಿಟಿ ಚೇರ್ಮೆನ್ ಸಿಎ ಕೆ. ರಾಜಶೇಖರ ಅವರು ಸ್ವಾಗತ ಕೋರಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ವಂದಿಸಿದರು. ಈ ಸಭೆಯಲ್ಲಿ ಉಪಾಧ್ಯಕ್ಷರಾದ ಸೊಂತ ಗಿರಿಧರ್, ಜಂಟಿ ಕಾರ್ಯದರ್ಶಿಗಳಾದ ವಿ. ರಾಮಚಂದ್ರ, ಖಜಾಂಚಿಗಳಾದ ನಾಗಳ್ಳಿ ರಮೇಶ್, ವಿವಿಧ ಸಂಘಟನೆಗಳವರು, ಟ್ಯಾಕ್ಸ್‌ ಪ್ರಾಕ್ಟೀಷನರ್ಸ್‌ ಪಾಲ್ಗೊಂಡಿದ್ದರು.