ಬೆಂಗಳೂರು, ಏ.27, ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಹಣ್ಣು, ತರಕಾರಿ, ಹೂವು ಬೆಳೆದು ನಷ್ಟಗೊಂಡಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಮಂತ್ರಿ ಎಚ್. ಡಿ. ದೇವೇಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಸಂಬಂಧ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಹಣ್ಣು, ತರಕಾರಿ, ಹೂವು ಬೆಳೆದು ರೈತರು ಸಂಕಷ್ಟಕ್ಕೆ ಸಿಲುಕಿ ನಷ್ಟಕ್ಕೆ ಈಡಾದ ಹಳೇ ಮೈಸೂರು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಸೇರಿ ರಾಜ್ಯದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕೊರೊನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಲಾಕ್ ಡೌನ್ ಜಾರಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದೀರಿ. ನಿಮ್ಮೆಲ್ಲಾ ಪ್ರಾಮಾಣಿಕ ಪ್ರಯತ್ನಗಳಿಗೆ ವೈಯಕ್ತಿಕವಾಗಿ ಹಾಗೂ ನಮ್ಮ ಪಕ್ಷದಿಂದಲೂ ಸಹಕಾರವಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿ ಒಂದು ತಿಂಗಳು ಮುಟ್ಟಿದೆ. ಈ ಸಂದರ್ಭದಲ್ಲಿ ಸಂಘಟಿತ ಹಾಗೂ ಅಸಂಘಟಿತ. ವಲಯದ ಕೂಲಿ ಕಾರ್ಮಿಕರು ಸಾಕಷ್ಟು ತೊಂದರೆಗೊಳಗಾಗಿದ್ದು ತಮಗೆ ಗೊತ್ತೇ ಇದೆ. ಜತೆಗೆ, ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ರೈತಾಪಿ ಸಮುದಾಯ. ಅದರಲ್ಲೂ ಹಣ್ಣು ತರಕಾರಿ ಹೂವು ಬೆಳೆದವರು ಕಣ್ಣೀರಿಡುವಂತಾಗಿದೆ ಎಂದು ಮಾಜಿ ಪ್ರಧಾನಿ ತಿಳಿಸಿದ್ದಾರೆ.
ಇತ್ತ ಸ್ಥಳೀಯ ಮಾರುಕಟ್ಟೆಯೂ ಇಲ್ಲ, ಅತ್ತ ಬೇರೆ ರಾಜ್ಯ, ದೇಶಗಳಿಗೆ ರಫ್ತು ಸಾಧ್ಯವಾಗಿಲ್ಲ. ಹಳೇ ಮೈಸೂರು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹಣ್ಣು ತರಕಾರಿ ಹೂವು ಬೇಡಿಕೆ ಇಲ್ಲದೆ ಲಕ್ಷಾಂತರ ರೂ. ವೆಚ್ಚ ಮಾಡಿ ಬೆಳೆದ ರೈತರು ಇಂದು ಸಾಲಗಾರರಾಗಿದ್ದಾರೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ, ಕರ್ಬೂಜ , ಬಾಳೆಹಣ್ಣು, ದ್ರಾಕ್ಷಿ, ದಾಳಿಂಬೆ, ಪಪ್ಪಾಯ, ಸೀಬೆ, ಸಪೋಟ ಬೆಳೆದವರು ಕಟಾವು ಮಾಡಿ ಬೇಡಿಕೆ ಇಲ್ಲದೆ ಲಕ್ಷಾಂತರ ಟನ್ ಹೊಲ ತೋಟಗಳಲ್ಲೇ ಬಿಟ್ಟು ಕೊಳೆಯುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೆಲವೆಡೆ ಅಲ್ಪ ಸ್ವಲ್ಪ ಅನಿವಾರ್ಯ ವಾಗಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ಬೆಳೆಗೆ ಮಾಡಿದ ವೆಚ್ಚ ಇರಲಿ, ಕಟಾವು ಮಾಡಲು ನೀಡಿದ ಹಾಗೂ ಸಾಗಣೆಯ ವೆಚ್ಚವೂ ಗಿಟ್ಟಿಲ್ಲ. ಅದೇ ರೀತಿಯಾಗಿ ಲಕ್ಷಾಂತರ ಎಕರೆಯಲ್ಲಿ ಬೆಳೆದ ಟೊಮ್ಯಾಟೊ, ಆಲೂಗಡ್ಡೆ, ಬೀಟ್ ರೋಟ್ , ಹೂ ಕೋಸು, ಎಲೆ ಕೋಸು, ದಪ್ಪ ಮೆಣಸಿನಕಾಯಿ, ನವಿಲು ಕೋಸು, ಗೆಣಸು, ಬೂದುಗುಂಬಳಕಾಯಿ, ಕ್ಯಾರೆಟ್ , ಬೀನ್ಸ್, ಸೊಪ್ಪು, ಈರುಳ್ಳಿ ಮಾರಾಟವಾಗದೆ ಈ ಒಂದು ತಿಂಗಳಲ್ಲಿ ರೈತರು ಕಂಗಾಲಾಗಿದ್ದಾರೆ.
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹೂವು ಬೆಳೆದವರಂತೂ ಶೂನ್ಯ ಮಾರುಕಟ್ಟೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಭಯಾನಕ ಸ್ಥಿತಿ ನಿರ್ಮಾಣವಾಗಿದೆ. ಶ್ರೇಷ್ಠ ಗುಣಮಟ್ಟದ ಹೂವು ಬೆಳೆದು ವಿದೇಶಗಳಿಗೆ ರಫ್ತು ಮಾಡುತ್ತಿದ್ದ ರಾಜ್ಯದ ಹೆಸರು ಜಗತ್ತಿನಲ್ಲಿ ಎತ್ತಿ ಹಿಡಿದಿದ್ದ ನಮ್ಮ ರೈತರು ಬೀದಿಗೆ ಬೀಳುವಂತಾಗಿದೆ.
ಈ ಎಲ್ಲ ಸಂಗತಿಗಳನ್ನು ಗಮನಿಸಿ ತಾವು ಹಣ್ಣು ತರಕಾರಿ ಹೂವು ಬೆಳೆಗಾರರ ನೆರವಿಗೆ ಬರಬೇಕು. ಕೃಷಿತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಸಮೀಕ್ಷೆ ಮಾಡಿಸಿ ಲಾಕ್ ಡೌನ್ ನಿಂದಾಗಿ ನಷ್ಟಗೊಂಡಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಬಜೆಟ್ ನಲ್ಲಿ ಘೋಷಿಸಿರುವ ಹಲವು ಯೋಜನೆ ಕೈ ಬಿಟ್ಟರೂ ಸರಿಯೇ ಅನ್ನದಾತನ ಕೈ ಬಿಡಬೇಡಿ. ರೈತರ ಪರ ಕಾಳಜಿ ಹೊಂದಿರುವ ತಮ್ಮಿಂದ ಆ ವರ್ಗ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ ಎಂದು ತಿಳಿಸಿದ್ದಾರೆ.
ಹಾಲಿಗೆ ಮಾರುಕಟ್ಟೆ ಇಲ್ಲ ದ ಕಾರಣ ರಾಜ್ಯ ಸರ್ಕಾರವೇ ನಿತ್ಯ ಏಳೂವರೆ ಲಕ್ಷ ಲೀಟರ್ ಹಾಲು ಖರೀದಿಸಿ ಬಡವರಿಗೆ ಹಂಚುವ ಮೂಲಕ ಹಾಲು ಉತ್ಪಾದಕರ ನೆರವಿಗೆ ಬಂದಿರಿ , ಅಂತಹ ದಿಟ್ಟ ತೀರ್ಮಾನ ಕೈಗೊಂಡಿದ್ದಕ್ಕೆ ನಿಮಗೆ ಹಾಗೂ ಸಂಪುಟ ಸಚಿವರಿಗೆ ಅಭಿನಂದನೆಗಳು. ಹಾಲು ಒಕ್ಕೂಟಗಳಿಗೆ ಅದ ಬಾಬ್ತಿನ ಹಣ ಬೇಗ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ. ಹಣ್ಣು ತರಕಾರಿ ಹೂವು ಬೆಳೆದು ಆರ್ಥಿಕ ವಾಗಿ ನಷ್ಟಗೊಂಡಿರುವ ರೈತರ ನೆರವಿಗೆ ಮುಂದಾಗಿ. ಇಲ್ಲದಿದ್ದರೆ ಆ ಕುಟುಂಬಗಳು ಜಮೀನು ಮಾರಿ ಕೃಷಿ ಬಿಡುವ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕವನ್ನು ಪತ್ರದಲ್ಲಿ ದೇವೇಗೌಡರು ವ್ಯಕ್ತಪಡಿಸಿದ್ದಾರೆ.