ನಾಳೆ ವಿಪಕ್ಷ ಹಾಗೂ ರೈತ ಮುಖಂಡರೊಂದಿಗೆ ಸಿದ್ದರಾಮಯ್ಯ ಸಭೆ

ಬೆಂಗಳೂರು, ಏ.29,ಲಾಕ್‍ಡೌನ್  ನಿಂದಾಗಿ ಕಾರ್ಮಿಕ ವರ್ಗ ಹಾಗೂ ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ  ಚರ್ಚಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಾಳೆ ವಿರೋಧ ಪಕ್ಷಗಳ ನಾಯಕರು  ಹಾಗೂ ರೈತ ಸಂಘಟನೆಗಳ ಪ್ರಮುಖರ ಸಭೆ ಕರೆದಿದ್ದಾರೆ.
ವಿಧಾನಸೌಧದ ಮೊದಲ  ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದೆ.   ಕಾಂಗ್ರೆಸ್, ಜೆಡಿಎಸ್, ಜೆಡಿಯು, ಸಿಪಿಐಎಂ, ಸಿಪಿಐಎಂ ಹಾಗೂ ವಿವಿಧ ರೈತ ಸಂಘಟನೆಗಳ  ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.  ಸಭೆಯಲ್ಲಿ ಭಾಗವಹಿಸುವಂತೆ ಸಿದ್ದರಾಮಯ್ಯ ಅವರು  ಎಲ್ಲ ನಾಯಕರಿಗೂ ಪತ್ರ ಬರೆದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಲಾಕ್‍ಡೌನ್  ಹೇರಿ ಒಂದು ತಿಂಗಳಿಗಿಂತ ಹೆಚ್ಚು ದಿನಗಳಾಗುತ್ತಿದ್ದು, ನಿತ್ಯದ ದುಡಿಮೆಯನ್ನು ಆಧರಿಸಿ  ಬದುಕುತ್ತಿರುವ, ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿರುವ ವಿವಿಧ  ಸಮುದಾಯಗಳವರು,  ಅಟೋ, ಟ್ಯಾಕ್ಸಿ ಚಾಲಕರು ಮತ್ತು ಬೀದಿ ಬದಿಯ ವ್ಯಾಪಾರಿಗಳ ಬದುಕು  ದುಸ್ತರವಾಗಿರುವುದರ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಹಲವು ಸಭೆಗಳನ್ನು ಮಾಡಿ  ಸರ್ಕಾರಕ್ಕೆ ಮನವಿಗಳನ್ನು ನೀಡಲಾಗಿದೆ.
ಮತ್ತೊಂದೆಡೆ ಲಾಕ್‍ಡೌನ್‍ನಿಂದಾಗಿ  ರೈತರ ಸ್ಥಿತಿಯೂ ಶೋಚನೀಯವಾಗಿದೆ. ಬೆಳೆದ ಬೆಳೆಗಳನ್ನು ಖರೀದಿ ಮಾಡುವವರಿಲ್ಲದೆ, ಸಾಗಣೆ,  ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಬೀದಿಪಾಲಾಗುವ ಹಂತ ತಲುಪಿದ್ದಾರೆ. ಅನೇಕ  ಕಡೆಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ರಸ್ತೆಗೆ ಸುರಿಯುತ್ತಿರುವ ಬಗ್ಗೆ, ಅವರ  ಜಮೀನುಗಳಲ್ಲಿಯೇ ಹಾಳಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನಿತ್ಯ ವರದಿಗಳು ಬರುತ್ತಿವೆ.
ಅಲ್ಲದೆ,  ಪೂರ್ವ ಮುಂಗಾರಿನ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಿಂದಾಗಿ ಹಲವೆಡೆ ರೈತರು ಬೆಳೆದ  ಭತ್ತ, ತರಕಾರಿ, ಹಣ್ಣಿನ ಬೆಳೆಗಳು ವ್ಯಾಪಕವಾಗಿ ಹಾನಿಗೊಳಗಾಗಿವೆ. ನಷ್ಟಕ್ಕೆ ಒಳಗಾದ  ರೈತರಿಗೂ ಪರಿಹಾರ ಸಿಕ್ಕಿಲ್ಲ. ಈ ನಡುವೆ ಪೂರ್ವ ಮುಂಗಾರು ಬಿತ್ತನೆಗೆ ಮುಂದಾಗಿರುವ  ರೈತರಿಗೆ ಸಮರ್ಪಕ ಪ್ರಮಾಣದಲ್ಲಿ ಗುಣಮಟ್ಟದ ಬೀಜ, ಗೊಬ್ಬರ ದೊರೆಯದಿರುವ ಕುರಿತು  ದೂರುಗಳು ಬರುತ್ತಿವೆ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಲು ಕೈಗೊಳ್ಳಬೇಕಾದ  ಕ್ರಮಗಳ ಕುರಿತು ಚರ್ಚಿಸಲು, ಈ ವಿಚಾರದಲ್ಲಿ ಎಲ್ಲ ನಾಯಕರ ಸಲಹೆ, ಸೂಚನೆ ಕೋರಲು ಸಭೆ  ಕರೆಯಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.