ಇಂದಿನ ಒತ್ತಡದ ಬದುಕಿಗೆ ಶಿವೋಪಾಸನೆ ಜೀವಾಮೃತ: ಪ್ರೊ. ಕುಪ್ಪಸಗೌಡರ
ಬೆಳಗಾವಿ 28: ಶಿವರಾತ್ರಿ ನಮ್ಮ ಪರಂಪರೆಯ ಅವಿಭಾಜ್ಯ ಅಂಗ. ಭಾರತೀಯ ಸಂಸ್ಕೃತಿಯಲ್ಲಿ ಶಿವಸಂಸ್ಕೃತಿಯೇ ಜೀವಾಳ. ಶಿವನೊಂದಿಗೆ ಭಕ್ತನ ಉಪಾಸನೆ ಶಿವರಾತ್ರಿಯ ದಿವ್ಯಮಂತ್ರ. 12ನೇ ಶತಮಾನದ ಶರಣರು ಲೋಕದ ಚರಾಚರದಲ್ಲಿಯೂ ಶಿವಶಕ್ತಿಯ ದರ್ಶನ ಪಡೆದುಕೊಂಡರು. ಶರಣ ನೆದ್ದುಕುಳಿತರೆ ಶಿವರಾತ್ರಿ ಕಾಣಿರೊ ಎಂದು ಆತ್ಮ ಪರಮಾತ್ಮರ ಅವಿನಾಭಾವಸಂಬಂಧವನ್ನು ಅರುಹಿದರು ಎಂದು ಸಾಹಿತಿ ಕಲಾವಿದ ಪತ್ರಕರ್ತ ಪ್ರೊ.ಬಸವರಾಜ ಕುಪ್ಪಸಗೌಡರ ಹೇಳಿದರು.
ಅವರು ವೀರಶೈವ ಲಿಂಗಾಯತ ಮಹಾಸಭೆಯು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ‘ಶಿವರಾತ್ರಿ ಆಚರಣೆ ಮತ್ತು ಶರಣರು’ ವಿಷಯದ ಮೇಲೆ ಅನುಭಾವ ಚಿಂತನೆ ಮಾಡಿದರು.
ಭಾರತೀಯ ಪರಂಪರೆಯಲ್ಲಿ ಶಿವೋಪಾಸನೆ ಅತ್ಯಂತ ಪ್ರಾಚೀನವಾದುದು. ಹರ್ಪ ಮಹೆಂಜೋದಾರ ಸಂಸ್ಕೃತಿಯಿಂದ ಮೊದಲ್ಗೊಂಡು ಅನೇಕ ಶಾಸನಗಳು ಶಿವಸಂಸ್ಕೃತಿಯನ್ನು ವ್ಯಾಖ್ಯಾನಿಸುತ್ತಿವೆ. ಭಾರತದಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳು ಶಿವಶಕ್ತಿಕೇಂದ್ರಗಳಾಗಿ ಕೋಟ್ಯಂತರ ಭಕ್ತರನ್ನು ಸೆಳೆದಿವೆ. ಶಿವ ದೇವಾಲಯಗಳು ಭಕ್ತಿಪಾರಮ್ಯಕ್ಕೆ ನಿಚ್ಚಳನಿದರ್ಶನವಾಗಿ ನಿಂತಿವೆ. ಶರಣಸಂಸ್ಕೃತಿಯು ಕೂಡ ಶಿವಶಕ್ತಿಯ ಅಂತರ್ಜಲವನ್ನು ಹೆಚ್ಚಿಸಿತು. ಅಂತೆಯೆ ಶಿವ ಧ್ಯಾನ, ಚಿಂತನೆ, ಅನುಭಾವ ದರ್ಶನಗಳನ್ನು ನಮ್ಮ ಶರಣರು ಅತ್ಯಂತ ಮನೋಜ್ಞವಾಗಿ ವಚನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಶಿವನು ಜಗದಗಲ, ಮುಗಿಲಗಲ, ಮಿಗೆಯಗಲ, ಬ್ರಹ್ಮಾಂಡದಷ್ಟು ವಿಸ್ತಾರ ಅಗಮ್ಯ ಅಗೋಚರ ಎಂದು ಬಸವಣ್ಣನವರು ವ್ಯಾಖ್ಯಾನಿಸಿದರೆ, ಅಕ್ಕಮಹಾದೇವಿಯು ಪ್ರಕೃತಿಯ ಚರಾಚರದಲ್ಲಿಯೂ ಭಗವಂತನನ್ನು ಕಂಡು ವಿಸ್ಮಿತಗೊಂಡಳು. ಅಲ್ಲಮಪ್ರಭುದೇವ ಹಾಗೂ ಇತರ ಶರಣರು ಶಿವಪಾರಮ್ಯದ ಅನುಭಾವ ದರ್ಶನವನ್ನು ಮನೋಜ್ಞವಾಗಿ ವಚನಗಳಲ್ಲಿ ವಿಶ್ಲೇಷಿಸಿದ್ದಾರೆ. ಶರಣಸತಿ ಲಿಂಗಪತಿ ಎಂಬ ಭಾವ, ಲಿಂಗಾಂಗ ಸಾಮರಸ್ಯವೇ ಬದುಕಿನ ದರ್ಶನವಾಗಬೇಕೆಂಬ ಶರಣರ ತರ್ಕಗಳು ಆಧ್ಯಾತ್ಮಿಕತೆಗೆ ಸೋಪಾನವೆನಿಸಿವೆ. ಇಂದಿನ ಒತ್ತಡದ ಬದುಕಿನಲ್ಲಿ ಶಿವೋಪಾಸನೆ ಜೀವಾಮೃತವಿದ್ದಂತೆ. ನಮ್ಮ ಹೃದಯದಲ್ಲಿ ಪರಮಾತ್ಮನನ್ನು ಧಾರಣ ಮಾಡಿಕೊಳ್ಳಬೇಕಾಗಿದೆ. ಅಂತಹ ಶಿವಸತ್ಸಂಗದ ಮೂಲಕ ಬದುಕಿನ ಕಷ್ಟಗಳನ್ನು ಮರೆಯೋಣವೆಂದು ಹಲವಾರು ದೃಷ್ಟಾಂತ ಮೂಲಕ ಶಿವರಾತ್ರಿಯ ಮಹತ್ವವನ್ನು ಡಾ.ಕುಪ್ಪಸಗೌಡರ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ಮಾತನಾಡುತ್ತ, ಶಿವರಾತ್ರಿಯು ಭಕ್ತಿಯೋಗದ ದರ್ಶನವೆನಿಸಿದೆ. ನಿಜಭಕ್ತನಿಗೆ ಅನುದಿನವು ಶಿವರಾತ್ರಿಯೇ. ನಮ್ಮ ಉತ್ತಮವಾದ ಸೇವೆಯ ಮೂಲಕ ಶಿವಸ್ವರೂಪಿಯಾದ ಸಮಾಜಕ್ಕೆ ಸೇವೆಯನ್ನು ನೀಡುವಂತಾಗಬೇಕು. ದೀನದುರ್ಬಲರ ಸೇವೆಯೇ ಶಿವಪೂಜೆ, ಶಿವಧ್ಯಾನ. ಪ್ರತಿಯೊಬ್ಬರಲ್ಲಿಯೂ ದೈವತ್ವವು ಅಡಗಿದೆ. ಸತ್ಕರ್ಮಗಳೇ ಶಿವದರ್ಶನ. ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂಬ ಅಣ್ಣನವರ ಮಾತು ಶಿವದರ್ಶನಕ್ಕೆ ಅಮೃತನುಡಿಯಾಗಿದೆ. ಶಿವಭಕ್ತಿಯೂ ನಮ್ಮ ಮನದ ಮೈಲಿಗೆಯನ್ನು ಕಳೆಯಲೆಂದು ಹೇಳಿದರು.
ಸಾನಿಧ್ಯವನ್ನು ವಹಿಸಿದ್ದ ಕಾರಂಜಿಮಠದ ಪೂಜ್ಯ ಗುರುಸಿದ್ದ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ನಾವು ಮಾಡುವ ಪೂಜೆಗಳು ಯಾಂತ್ರಿಕವಾಗಿರಬಾರದು. ಶಿವಪೂಜೆ ಆತ್ಮಕ್ರಿಯೆಯೆನಿಸಿದೆ. ಶಿವನು ನಿಡಾರಂಭನು. ತೋರಿಕೆಯ ಭಕ್ತಿಯಿಂದ ಯಾವ ಪ್ರಯೋಜನಗಳು ದೊರೆಯವು. ಬಾಹ್ಯದ ಡಂಬಾಚಾರಕ್ಕಿಂತ ಅಂತರಂಗದ ಅರೆ್ಣ ಮುಖ್ಯ. ಈ ದೇಹವನ್ನೇ ದೇಗುಲವನ್ನಾಗಿ ಮಾಡಬೇಕೆಂದವರು ಶರಣರು. ಅಂತಹ ಶಿವಪಾರಮ್ಯವನ್ನು ನಾವು ಇಂದು ಸಂಪಾದಿಸಿಕೊಳ್ಳುವುದು ಅಗತ್ಯವೆನಿಸಿದೆ ಎಂದು ನುಡಿದರು.
ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಅನಿತಾ ಮಾಲಗತ್ತಿ ವಚನ ಪ್ರಾರ್ಥನೆ ಸಲ್ಲಿಸಿದರು. ಪದ್ಮಾ ಹೊಸಕೋಟಿ ವಚನ ವಿಶ್ಲೇಷಣೆ ಮಾಡಿದರು. ಸುಧಾ ಪಾಟೀಲ ಸ್ವಾಗತಿಸಿದರು. ಶ್ವೇತಾ ಹೆದ್ದೂರಶೆಟ್ಟಿ ಅತಿಥಿ ಪರಿಚಯ ಮಾಡಿದರು. ನ್ಯಾಯವಾದಿ ವಿ.ಕೆ.ಪಾಟೀಲ ವಂದಿಸಿದರು. ಮಂಜುಶ್ರೀ ಹಾವಣ್ಣನವರ ನಿರೂಪಿಸಿದರು.
ಮಹಾಸಭೆ ಜಿಲ್ಲಾ ಘಟಕದ ಉಪಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ, ರಮೇಶ ಕಳಸಣ್ಣನವರ, ಸೋಮಲಿಂಗ ಮಾವಿನಕಟ್ಟಿ, ಆರಿ್ಪ.ಪಾಟೀಲ, ಎಂ.ವೈ. ಮೆನಸಿನಕಾಯಿ, ಜ್ಯೋತಿ ಬದಾಮಿ, ಬಾಲಚಂದ್ರ ಬಾಗಿ, ಡಾ.ಮಹೇಶ ಗುರನಗೌಡರ, ಸರೋಜನಿ ನಿಶಾನದಾರ, ವೀನಾ ನಾಗಮೋತಿ ಮೊದಲಾದವರು ಉಪಸ್ಥಿತರಿದ್ದರು.