ಮುಂಬೈ, ಅ 9: ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಶಿವಸೇನೆ ನಡುವೆ ದಿನೆ ದಿನೇ ಹಗ್ಗ ಜಗ್ಗಾಟ ನಡೆಯುತ್ತಿರುವಾಗಲೇ ಆದಷ್ಟು ಬೇಗ ಶಿವಸೇನೆಯ ನಾಯಕರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹಿರಿಯ ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆದಷ್ಟು ಬೇಗ ಪಕ್ಷದ ಮುಖಂಡರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಯ ಬಹುದಿನಗಳ ಕನಸನ್ನು ನನಸು ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ನಾವು ಮೌನ ವಹಿಸುವುದು ಸಾಧ್ಯವಿಲ್ಲ. ನಾವು ಮೈತ್ರಿಯಲ್ಲಿರುವುದರಿಂದ ಕೆಲವು ವಿಷಯಗಳ ಬಗ್ಗೆ ಜಾಗರೂಕತೆಯಿಂದಲೇ ಮಾತನಾಡಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ರಾಜ್ಯಸಭಾ ಸದಸ್ಯರಾಗಿರುವ ರಾವತ್, ಜಮ್ಮು ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದುಮಾಡಬೇಕೆಂದು ಪಕ್ಷದ ಸಂಸ್ಥಾಪಕ ಬಾಳ ಠಾಕ್ರೆಯವರ ಕನಸಾಗಿತ್ತು ಎಂದು ಹೇಳಿದರು.