ಆತ್ಮಸಾಕ್ಷಿ ಒಪ್ಪುವ ಕಾರ್ಯ ಕೈಗೊಳ್ಳಿರಿ : ಎಸ್ಪಿ ಯಶೋಧಾ

ಆತ್ಮಸಾಕ್ಷಿ ಒಪ್ಪುವ ಕಾರ್ಯ ಕೈಗೊಳ್ಳಿರಿ : ಎಸ್ಪಿ ಯಶೋಧಾ Take action that is in line with your conscience: SP Yashoda


ಶಿಗ್ಗಾವಿ 12 : ಸರಕಾರಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಮಹಿಳೆ ಯಾವುದಕ್ಕೂ ಹಿಂಜರಿಯದೇ ಆತ್ಮಸಾಕ್ಷಿ ಒಪ್ಪುವ ಕಾರ್ಯ ಕೈಗೊಳ್ಳಬೇಕು. ಅದರಿಂದ ಇಲಾಖೆ ಹಾಗೂ ವ್ಯವಸ್ಥೆಗೆ ದಕ್ಕೆ ಬರಲು ಸಾಧ್ಯವಿಲ್ಲ ಎಂದು ಎಸ್ಪಿ ಯಶೋಧಾ ವಂಟಗೋಡಿ ಹೇಳಿದರು. ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ ಕಚೇರಿಗಳ ಸಂಕಿರ್ಣ ಭವನದಲ್ಲಿ ತಾಲೂಕು ಸರಕಾರಿ ನೌಕರರ ಸಂಘ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಿದಾಗ ನಮ್ಮಲ್ಲಿ ಮಾನಸಿಕ ಅಶಾಂತಿ ಕಾಡುತ್ತದೆ.

ಮನೆ ವಾತಾವರಣವೂ ಬದಲಾಗಿ, ಸಾಮರಸ್ಯದ ಕೊರತೆ ಎದುರಿಸಬೇಕಾಗುತ್ತದೆ ಎಂದರು.  ಮನೆಯಲ್ಲಿನ ಕೆಲಸದ ಒತ್ತಡ ಕಚೇರಿಗೆ, ಮನೆಗೆ ಕಚೇರಿ ಕೆಲಸದ ಒತ್ತಡ ಕೊಂಡಯ್ಯದರೆ ಮಾನಸಿಕವಾಗಿ ನೊಂದುಕೊಳ್ಳಬೇಕಾಗುತ್ತದೆ. ಇದರಿಂದ ಆರೋಗ್ಯದ ಮೇಲೆಯೂ ಪರಿಣಾಮ ಬೀರಲಿದೆ. ಇಂತಹ ತಪ್ಪು ಮಾಡಬೇಡಿ ಎಂದರು. ಸರಕಾರಿ ಕೆಲಸಗಳಲ್ಲಿ ತೊಡಗಿದ ಮಹಿಳೆಯರಿಗೆ ಅನಗತ್ಯವಾಗಿ ಕಿರುಕುಳ ಕೊಡುವುದು ಮತ್ತು ಅವರ ಕೆಲಸಗಳಿಗೆಅಡ್ಡಿಪಡಿಸಿದರೆ ಮುಲಾಜು ಇಲ್ಲದೇ ದೂರು ಕೊಡಿ. ಜತೆಗೆ ಅನಗತ್ಯವಾಗಿ ದೌರ್ಜನ್ಯಕ್ಕೊಳಗಾಗುವ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಸಮಾಜ ಮಾಡಬೇಕು ಎಂದರು. 

ಶ್ರೀಸದ್ಗುರು ಸಮರ್ಥ ಡಾ.ಎ.ಸಿ. ವಾಲಿ ಮಹಾರಾಜರು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಶೈಲಜಾ ಹುದ್ದಾರ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ನೌಕರರ ಸಂಘದ ಅಧ್ಯಕ್ಷ ಅರುಣಗೌಡ ಹುಡೇದಗೌಡ್ರ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲೇಶ ಕರಿಗಾರ, ವೈದ್ಯಾಧಿಕಾರಿ ಡಾ.ವಿಜಯಾ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ, ಅಬಕಾರಿ ನೀರೀಕ್ಷಕಿ ನಾಗಮ್ಮ ಮಣ್ಣಣ್ಣನವರ, ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ, ವಿನೋದಾ ಪಾಟೀಲ, ರಮೇಶ ಹರಿಜನ, ಶಿವಯೋಗಿ ದೌತಾಲಿ, ಸರೋಜಾ ಹರಿಜನ, ಪಕ್ಕಿರೇಶ ಹಿರೇಮಠ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.