ಹಡಪದ ಅಪ್ಪಣ್ಣವರ ಸಂದೇಶಗಳು ಸರ್ವಕಾಲಿಕ: ತಾ.ಪಂ. ಅಧ್ಯಕ್ಷ ದುರಗಣ್ಣವರ

ಗದಗ 16: ಹಡಪದ ಅಪ್ಪಣ್ಣನವರ ಸಂದೇಶಗಳು ಸಾರ್ವಕಾಲಿಕವಾಗಿದ್ದು   ಪ್ರತಿಯೊಬ್ಬರೂ  ತಮ್ಮ  ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಗದಗ ತಾ.ಪಂ. ಅಧ್ಯಕ್ಷ ಮೋಹನ ದುರಗಣ್ಣವರ ಅವರು ತಿಳಿಸಿದರು.   

       ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿಂದು  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ವತಿಯಿಂದ ಜರುಗಿದ ಹಡಪದ ಅಪ್ಪಣ್ಣ  ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

      ಹಡಪದ ಅಪ್ಪಣ್ಣನವರು 12 ನೇ ಶತಮಾನದ  ವಚನಕಾರರಲ್ಲಿ ಒಬ್ಬರು.   ಬಸವಣ್ಣನವರ ಆಪ್ತರೂ ಆಗಿದ್ದರು.  ಸಮಾಜದ  ಅನಿಷ್ಟಗಳಾದ  ಮೂಡನಂಬಿಕೆ, ಕಂದಾಚಾರಗಳನ್ನು ತೊಲಗಿಸಲು   ವಚನಗಳ ಮೂಲಕ  ಸಮಾಜದ ಏಳ್ಗೆಗಾಗಿ ಶ್ರಮಿಸಿದವರು ಎಂದು ದುರಗಣ್ಣವರ ಅವರು ಈ ಸಮುದಾಯದವರು ಈಗಿನ ಅವಶ್ಯಕತೆಗೆ ತಕ್ಕಂತೆ   ತಮ್ಮ  ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು   ತಿಳಿಸಿದರು.  

      ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ತೋಂಟದಾರ್ಯ ಮಠದ ಡಾ. ತೋಂಟದಾರ್ಯ  ಸಿದ್ಧರಾಮ  ಸ್ವಾಮಿಗಳು  ಆಶೀರ್ವಚನ ನೀಡಿ   ಶಿವಶರಣ ಅಪ್ಪಣ್ಣವರು    ಬಸವಣ್ಣನವರ  ಸಮಕಾಲೀನರು.      12 ನೇ ಶತಮಾನದಲ್ಲಿ ನಡೆದ ವಚನ ಚಳುವಳಿ ಜಾಗತಿಕ ಇತಿಹಾಸದಲ್ಲಿಯೇ ಶ್ರೇಷ್ಠ ಚಳುವಳಿಯಾಗಿತ್ತು.  ಸಮಾಜದಲ್ಲಿನ ಶೋಷಣೆ, ಮೂಢನಂಬಿಕೆಗಳ್ನು ಖಂಡಿಸಿ  ಜನರಲ್ಲಿ ಅರಿವು ಮೂಡಿಸಲು ಅವರು  ವಚನಗಳನ್ನು ರಚಿಸಿದ್ದರು.   ಇವು   ಸಾರ್ವಕಾಲಿಕ ಮೌಲ್ಯ ಹೊಂದಿವೆ.         ಹಡಪದ ಅಪ್ಪಣ್ಣ ಅವರು  200 ಕ್ಕಿಂತಲೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ.      ಒಬ್ಬ ಮನುಷ್ಯ  ಹುಟ್ಟಿ ಬಂದ ಮೇಲೆ  ಜೀವನವನ್ನು ಯಾವ ರೀತಿ ಸಾರ್ಥಕಪಡಿಸಕೊಳ್ಳಬೇಕು ಎಂದು ತಿಳಿಸಿರುವ ಅವರು ವ್ಯಕ್ತಿ ದುರಾಚಾರ, ದುರ್ವಸನಿಯಾಗಬಾರದು ಎಂದು  ತಿಳಿಸಿದ್ದಾರೆ ಎಂದು ಡಾ. ಸಿದ್ಧರಾಮ ಸ್ವಾಮಿಗಳು ನುಡಿದರು.       

ಗದಗ  ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ  ಪ್ರಕಾಶ ಅಸುಂಡಿ ಹಡಪದ ಅಪ್ಪಣ್ಣನವರ ಜೀವನ ಸಾಧನೆ ಕುರಿತು    ಉಪನ್ಯಾಸ ನೀಡಿ ಹಡಪದ ಅಪ್ಪಣ್ಣನವರ ಹುಟ್ಟೂರು  ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿಯ ಕುಸುಬಿನಹಾಳ.  ಅವರದು ಕ್ಷೌರಿಕ ಕಾಯಕ.  ಸಮಾಜದ ಉದ್ದಾರಕ್ಕಾಗಿ  ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.  ಹಡಪದ ಅಪ್ಪಣ್ಣನವರ  243 ವಚನಗಳು ಲಭ್ಯವಿದ್ದು ಅವು      ಸರಳ ಭಾಷೆಯ ನುಡಿಮುತ್ತುಗಳ  ಬೋಧನೆಗಳಾಗಿವೆ.       ಅವರ ಆಚಾರ, ತತ್ವಗಳನ್ನು ಮಕ್ಕಳಿಗೆ ಹೇಳಿಕೊಡುವ  ಮೂಲಕ ಶರಣ ಸಂಸ್ಕೃತಿ ಬೆಳೆಸಬೇಕು ಎಂದು  ನುಡಿದರು. 

         ಸಮಾರಂಭದಲ್ಲಿ  ಹಡಪದ ಅಪ್ಪಣ್ಣ  ಸಮಾಜದ ಪ್ರಮುಖರಿಗೆ , ಎಸ್.ಎಸ್.ಎಲ್.ಸಿ. ಪಿ.ಯುಸಿ ಪರೀಕ್ಷೆಯಲ್ಲಿ    ಹೆಚ್ಚು ಅಂಕ ಗಳಿಸಿದ  ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.  

         ಸಮಾರಂಭದಲ್ಲಿ   ಗದಗ ತಾ.ಪಂ. ಉಪಾಧ್ಯಕ್ಷೆ ಸುಜಾತಾ ಖಂಡು,  ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ತಹಶೀಲ್ದಾರರಾದ ಶ್ರೀನಿವಾಸ ಕುಲಕರ್ಣಿ,  ನಿರ್ಮಿತ್ ಕೇಂದ್ರ ಗಂಗಾಧರ ಶಿರೋಳ,  ಗದಗ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ  ಮೋಹನ ಚಂದಪ್ಪನವರ,  ಹಡಪದ ಅಪ್ಪಣ್ಣ ಸಮಾಜ ಸೇವಾ  ಹುಲಕೋಟಿ  ಸಂಘದ ಅಧ್ಯಕ್ಷ  ಕಲ್ಲಪ್ಪ ಹಡಪದ, ಗದಗ ಬೆಟಗೇರಿ   ಸಂಘದ ಅಧ್ಯಕ್ಷ ಟಿ. ವೈ. ಹಡಪದ, ಹಡಪದ ಅಪ್ಪಣ್ಣ ಸಮಾಜದ ಗುರು ಹಿರಿಯರು,  ಮುಖಂಡರುಗಳು, ಗಣ್ಯರು,   ವಿವಿಧ  ತಾಲೂಕಾ ಪದಾಧಿಕಾರಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಸಾವಿತ್ರಿ ಲಮಾಣಿ ನಾಡಗೀತೆ ಪ್ರಸ್ತುತಿಸಿದರು.  ಅರ್ಜುನ್ ಗೊಳಸಂಗಿ ಸರ್ವರನ್ನು ಸ್ವಾಗತಿಸಿ ವಂದಿಸಿದರು.   ಜಿಲ್ಲಾ ಹಡಪದ ಅಪ್ಪಣ್ಣ ಸೇವಾ ಸಂಘದ  ಪ್ರಧಾನ ಕಾರ್ಯದರ್ಶಿ ಎ.ವಿ.  ಪ್ರಭು ಕಾರ್ಯಕ್ರಮ ನಿರೂಪಿಸಿದರು.