ಕೊವಿಡ್‍-19 ನಿಂದ ಹಿರಿಯ ಕಾಂಗ್ರೆಸ್ ಮುಖಂಡ, ಅಜ್ಮೀರ್ ದರ್ಗಾ ಟ್ರಸ್ಟಿ ಬದ್ರುದ್ದೀನ್ ಶೇಖ್ ಸಾವು

ಅಹಮದಾಬಾದ್, ಏಪ್ರಿಲ್ 27, ಹಿರಿಯ ಕಾಂಗ್ರೆಸ್ ಮುಖಂಡ, ಗುಜರಾತ್‍ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಹಾಗೂ ಅಜ್ಮೀರ್ ಮೂಲದ ವಿಶ್ವಪ್ರಸಿದ್ಧ ಖ್ವಾಜಾ   ಮೊಯಿನುದ್ದೀನ್ ಚಿಶ್ತಿ ದರ್ಗಾ ಸಮಿತಿಯ ಟ್ರಸ್ಟಿ ಬದ್ರುದ್ದೀನ್   ಶೇಖ್ ನಿನ್ನೆ ಸಂಜೆ ಇಲ್ಲಿ ಕೋವಿಡ್ -19 ಸೋಂಕಿನಿಂದ ಸಾವನ್ನಪ್ಪಿದ್ದಾರೆ.ಅವರಿಗೆ 68 ವರ್ಷ ವಯಸ್ಸಾಗಿತ್ತು. ಬದ್ರುದ್ದೀನ್‍ ಶೇಖ್‍ ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.ಅಹಮದಾಬಾದ್ ನಗರಪಾಲಿಕೆಯ ಬೆಹ್ರಾಂಪುರ್   ಪ್ರದೇಶದ ಕಾರ್ಪೊರೇಟರ್ ಆಗಿದ್ದ ಶೇಖ್ ಅವರನ್ನು   ಇಲ್ಲಿನ ಎಸ್‌ವಿಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ವಾರಗಳಿಂದ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿತ್ತು. ಮಧುಮೇಹ   ಸೇರಿದಂತೆ ಕೆಲ ಆರೋಗ್ಯ   ಸಮಸ್ಯೆಗಳನ್ನು ಅವರು ಹೊಂದಿದ್ದರು. ಪಕ್ಷದ ವಕ್ತಾರ   ಮನೀಶ್ ದೋಶಿ ಇಂದು ಯುಎನ್‌ಐಗೆ ಈ ವಿಷಯ ತಿಳಿಸಿದ್ದು, ಅವರ ಪತ್ನಿ ಸಹ ಕೋವಿಡ್- 19 ವೈರಸ್ ಸೋಂಕಿಗೆ ಒಳಗಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇಖ್ ಅವರು ಗುಜರಾತ್ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ, ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು. ನಗರಪಾಲಿಕೆಯಲ್ಲಿ   ವಿರೋಧ ಪಕ್ಷದ ನಾಯಕರಾಗಿಯೂ ಸೇವೆ   ಸಲ್ಲಿಸಿದ್ದರು. ಈ ಮಧ್ಯೆ, ರಾಜ್ಯದಲ್ಲಿ ಒಟ್ಟು ಕರೋನ ಸೋಂಕು ಪ್ರಕರಣಗಳ ಸಂಖ್ಯೆ 3300 ದಾಟಿದ್ದು, ಈ ಪೈಕಿ ಸುಮಾರು 2200   ಪ್ರಕರಣಗಳು ಅಹಮದಾಬಾದ್‌ ನಗರವೊಂದರಲ್ಲೇ   ವರದಿಯಾಗಿವೆ. ಒಟ್ಟು 150 ಕ್ಕೂ ಹೆಚ್ಚು ಸಾವುಗಳ ಪೈಕಿ 100 ಕ್ಕೂ ಹೆಚ್ಚು ಸಾವುಗಳು ಅಹಮದಾಬಾದ್‌ನಲ್ಲೇ ಸಂಭವಿಸಿವೆ.