ಬೆಂಗಳೂರು, ಏ.30,ಕೋವಿಡ್ - 19 ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತರು, ಅಂಗನವಾಡಿ ಸಹಾಯಕರು, ಪೌರ ಕಾರ್ಮಿಕರು ಹಾಗು ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕಿಗೆ ಒಳಪಟ್ಟು ಮೃತಪಟ್ಟರೆ 30 ಲಕ್ಷ ರೂಪಾಯಿಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇತರೆ ಕೋವಿಡ್ 19 ವಾರಿಯರ್ಸ್‌ಗೆ ಸರಕಾರ ನೀಡಿರುವ ಆರೋಗ್ಯ ವಿಮೆಯ ಭಾಗ್ಯ ಮಾತ್ರ ಅಂಗನವಾಡಿ ಕಾರ್ಯಕರ್ತೆ ಇರಲಿಲ್ಲ. ವೈದ್ಯರು, ಆರೋಗ್ಯ ಸಹಾ ಯಕಿಯರು, ಪೊಲೀಸರು, ಆಶಾ ಕಾರ್ಯಕರ್ತೆಯರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಕೂಡ ಕೋವಿಡ್ 19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದಾರೆ. ಲಾಕ್‌ಡೌನ್ ಆರಂಭವಾದ ದಿನದಿಂದ ಅಂಗನವಾಡಿ ಕಾರ್ಯಕರ್ತೆಯರು ಸುಡು ಬಿಸಿಲಿನಲ್ಲಿಯೂ ಆಯಾಯ ಪಂಚಾಯತ್ ವ್ಯಾಪ್ತಿಯಲ್ಲಿರುವ ಮನೆ – ಮನೆಗಳಿಗೆ ಭೇಟಿ ನೀಡಿ, ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಹೊರ ಜಿಲ್ಲೆ ಗಳಿಂದ, ಹೊರ ರಾಜ್ಯದಿಂದ ಇಲ್ಲಿಗೆ ಬಂದಿರುವ ನೂರಾರು ಮಂದಿಯನ್ನು ಗುರುತಿಸಿ ಅವರನ್ನು ಹೋಮ್ ಕ್ವಾರಂಟೈನ್‌ನಲ್ಲಿರಿಸಿ, ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ.
ಕೋವಿಡ್ 19 ಸೋಂಕಿನ ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತರನ್ನು ಹಾಗೂ ಅವರ ಪರಿಶ್ರಮವನ್ನು ಗುರುತಿಸ ದಿರುವುದು ಅಂಗನವಾಡಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ವಿವಿಧೆಡೆ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು “ಕೋವಿಡ್ 19 ವಾರಿಯರ್’ಗಳಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಆದರೆ ನಮಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದ್ದರು.
ಕೋವಿಡ್ 19 ಸೋಂಕಿನ ವಿರುದ್ಧ ಸೆಣಸುತ್ತಿರುವ ವೈದ್ಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರಿಗೆ ಸರಕಾರ ಆರೋಗ್ಯ ವಿಮೆ ಜಾರಿಗೊಳಿಸಿದೆ. ಆದರೆ ಅಂಗನವಾಡಿ ಕಾರ್ಯಕರ್ತರನ್ನು ಮಾತ್ರ ನಿರ್ಲಕ್ಷಿಸಲಾಗಿದೆ. ಕೋವಿಡ್ 19 ತಡೆ ಕಾರ್ಯಾಚರಣೆ ಸಂದರ್ಭದಲ್ಲಿ ಕಾರ್ಯಕರ್ತೆಯರು ಸೋಂಕಿತರಾದರೆ ಅಥವಾ ಅನಾಹುತ ಉಂಟಾದರೆ ಯಾವುದೇ ರಕ್ಷಣೆ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೂ ಕೂಡ ಸರಕಾರ ವಿಮಾ ಸೌಲಭ್ಯ ಜಾರಿಗೊಳಿಸಬೇಕು ಮತ್ತು ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಯಾಗಿತ್ತು. ಆದರೆ ಇದೀಗ ಸರ್ಕಾರ ಅಂಗನವಾಡಿ ಕಾರ್ಯಕರ್ತರು, ಅಂಗನವಾಡಿ ಸಹಾಯಕರು, ಪೌರ ಕಾರ್ಮಿಕರು ಹಾಗು ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕಿಗೆ ಒಳಪಟ್ಟು ಮೃತಪಟ್ಟರೆ 30 ಲಕ್ಷ ರೂಪಾಯಿಗಳ ಪರಿಹಾರ ನೀಡುವುದಾಗಿ ಪ್ರಕಟಿಸಿದೆ.