ಬೆಳಗಾವಿ : ಭತ್ಯಗಳ ಹೆಸರಲ್ಲಿ ಸರಕಾರಕ್ಕೆ ಸರ್ಕಾರಕ್ಕೆ ಪಂಗನಾಮ ಹಾಕಿದ ಡಾಕ್ಟರಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸದ ಅಧಿಕಾರಿಗಳ ವಿರುದ್ದ ಉಚ್ಛ ನ್ಯಾಯಾಲಯದಲ್ಲಿ ಪಿಐಎಲ್ ಗೆ ಚಿಂತನೆ ನಡೆಸಿದ್ದು ಈ ಕುರಿತು ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಇಂದಿಲ್ಲಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಅಂಕಿತಾಧಿಕಾರಿ ಮತ್ತು ಆಹಾರ ಸುರಕ್ಷಾಧಿಕಾರಿಗಳಾಗಿ ಕಾರ್ಯಕಾರಿ ಹುದ್ದೆಗಳಲ್ಲಿ ನಿಯೋಜನೆ ಮೇಲೆ ಸೇವೆ ಸಲ್ಲಿಸುತ್ತಿದ್ದ 36 ಜನ ವೈದ್ಯರುಗಳು ನಿಯಮಬಾಹೀರವಾಗಿ ಒಟ್ಟು 3,50,18,800 ( 3 ಕೋಟಿ 50 ಲಕ್ಷ 18 ಸಾವಿರದ 800) ರೂ.ಗಳನ್ನು ವಿವಿಧ ಭತ್ಯೆಗಳ ರೂಪದಲ್ಲಿ ಸರ್ಕಾರದ ಖಜಾನೆಯಿಂದ ಪಾವತಿಸಿಕೊಂಡಿರುವ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ.
ಭತ್ಯೆ ಹಾಗೂ ವಿಶೇಷ ಭತ್ಯೆಗಳನ್ನು ಪಡೆಯಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲದಿದ್ದರೂ ಕೂಡಾ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು 2021ರ ಉಪ-ನಿಯಮಗಳನ್ನು ಉಲ್ಲಂಘಿಸಿ ಅಧಿಕಾರದ ದುರುಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ಕೋಟಿ, ಕೋಟಿ ನಷ್ಟ ಉಂಟು ಮಾಡಿದ್ದರೂ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸದೇ ಇರುವ ಹಿರಿಯ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಸರ್ಕಾರದ ಪತ್ರ ಸಂಖ್ಯೆ- ಆ.ಕು.ಕ.166.ಎಚ್.ಎಸ್,ಎಚ್ 2023 ದಿ. 12-05-2023ರ ಪ್ರಕಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ನಿಯೋಜನೆ ಮೇಲೆ ಕರ್ತವ್ಯ ನೀರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ತಮ್ಮ ವೈದ್ಯ ವೃತ್ತಿಗೆ ಅನುಸಾರವಾದ ಕರ್ತವ್ಯ ಮತ್ತು ಜವಾಬ್ಧಾರಿಯನ್ನು ನಿರ್ವಹಿಸುವದಿಲ್ಲವಾದರಿಂದ ಅವರುಗಳಿಗೆ ವಿದ್ಯಾರ್ಹತೆ, ತಜ್ಞತೆ, ಕಾರ್ಯ ಸ್ವರೂಪವನ್ನು ಆಧರಿಸಿ ನೀಡಲಾಗುವ ವೈದ್ಯಕೀಯ ಭತ್ಯೆ, ವಿಶೇಷ ಭತ್ಯೆಗೆ ಇಂಥವರು ಅರ್ಹರಿರುವುದಿಲ್ಲಾ ಎಂದು ಸೂಚಿಸಲಾಗಿರುವ ಅಂಶವನ್ನು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳನ್ನು ಉಲ್ಲಂಘಿಸಿದಲ್ಲದೇ ಕರ್ತವ್ಯ ಲೋಪವೆಸಗಿ ಅಧಿಕಾರ ದುರುಪಯೊಗ ಪಡಿಸಿಕೊಂಡು ಸರ್ಕಾರದ ಖಜಾನೆಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿದ್ದರೂ ಕೂಡಾ ಇವರೆಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸದೇ ಮತ್ತು ಇಲಾಖಾ ವಿಚಾರಣೆಗೆ ಕೂಡ ಆದೇಶ ಹೊರಡಿಸುವದನ್ನು ಕೈ ಬಿಟ್ಟು ಕೇವಲ ಕಾಟಾಚಾರಕ್ಕೆ ಎಂಬಂತೆ ಕಾನೂನು ಬಾಹೀರವಾಗಿ ಇವರು ಸೆಳೆದುಕೊಂಡಿರುವ ಹಣವನ್ನು ಇವರ ವೇತನ, ಪಿಂಚಣಿಗಳಿಂದ ಕಟಾವು ಮಾಡಿ ಸರ್ಕಾರದ ಖಜಾನೆಗೆ ಜಮೆ ಮಾಡುವಂತೆ ಆದೇಶವೊಂದನ್ನು ಹೊರಡಿಸುವದರ ಮೂಲಕ ಜೈಲಿಗೆ ಸೇರಬೇಕಾಗಿದ್ದ ಈ ವೈದ್ಯರುಗಳನ್ನು ರಕ್ಷಣೆ ಮಾಡಲು ಇಲಾಖೆಯ ಹಿರಿಯ ಅಧಿಕಾರಿಗಳು ಮುಂದಾಗಿರುವ ಕ್ರಮದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ನುಡಿದರು.