ಸ್ವಾಭಿಮಾನಕ್ಕಾಗಿ ದಿಟ್ಟ ಹೋರಾಟದ ಹೃದಯಸ್ಪರ್ಶಿ ಪಯಣ - ಭಾರ್ಗವಿ LL.B

A Heartwarming Journey of a Bold Struggle for Self-Esteem - Bhargavi LL.B

 ಕಲರ್ಸ್‌ ಕನ್ನಡದಲ್ಲಿ ಹೊಸ ಧಾರಾವಾಹಿ ಮಾರ್ಚ್‌ 3 ರಿಂದ ಸೋಮವಾರದಿಂದ - ಶುಕ್ರವಾರ ರಾತ್ರಿ 8.30ಕ್ಕೆ        

‘ಭಾರ್ಗವಿ LL.B’, ತನ್ನ ತಂದೆಯ ಘನತೆಯನ್ನು ಮರಳಿ ಗಳಿಸಲು ಕಾನೂನಿನ ಪ್ರಪಂಚದಲ್ಲಿ ಎಲ್ಲ ಅಡೆತಡೆಗಳನ್ನು ಮೀರಿ ಬಲಿಷ್ಠ ಪ್ರಭಾವಶಾಲಿಗಳ ವಿರುದ್ಧ ಹೋರಾಡುವ ಧೀರ ಯುವತಿಯ ಸ್ಫೂರ್ತಿದಾಯಕ ಕತೆ. ಕಲರ್ಸ್‌ ಕನ್ನಡ, ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕತೆಗಳ ಮೂಲಕ ಜನಪ್ರಿಯವಾಗಿದೆ. ಇದೀಗ, ನ್ಯಾಯ ಮತ್ತು ಅಧಿಕಾರದ ಮುಖಾಮುಖಿಯಾಗುವ ಹೃದಯಸ್ಪರ್ಶಿ ಕತೆ “ ‘ಭಾರ್ಗವಿ  LL.B.’  ಅನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ಈ ಬಹುನೀರೀಕ್ಷಿತ ಧಾರಾವಾಹಿ ಮಾರ್ಚ್‌ 3 ರಿಂದ ಸೋಮವಾರದಿಂದ - ಶುಕ್ರವಾರ ರಾತ್ರಿ 8.30ಕ್ಕೆ ನಿಮ್ಮ ಕಲರ್ಸ್‌ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ. ಈ ಕಥೆ, ಧೈರ್ಯಶಾಲಿ ಹಾಗೂ ಮಧ್ಯಮ ವರ್ಗದ ಯುವತಿ ಭಾರ್ಗವಿ ಮತ್ತು ಅತ್ಯಂತ ಪ್ರಭಾವಶಾಲಿ ಮತ್ತು ಬಲಿಷ್ಠ ವಕೀಲ ಜಯಪ್ರಕಾಶ್ ಪಾಟೀಲ್ ನಡುವಿನ ಸ್ವಾಭಿಮಾನದ ಮಹಾ ಸಂಘರ್ಷದ ಕಥೆ ಹೇಳುತ್ತದೆ. ಭಾರ್ಗವಿಯ ಲಾಯರ್ ತಂದೆಯನ್ನು ಕೋರ್ಟಿನಲ್ಲಿ ಹೀನಾಯವಾಗಿ ಅವಮಾನಿಸಿ ತಲೆ ತಗ್ಗಿಸುವ ಹಾಗೆ ಮಾಡಿ ವಕೀಲಿಕೆಯನ್ನೇ ತ್ಯಜಿಸುವಂತೆ ಮಾಡಿದವನು ಜೆ.ಪಿ. ಪಾಟೀಲ್‌. ತನ್ನ ವೃತ್ತಿಜೀವನದಲ್ಲಿ ಒಂದೇ ಒಂದು ಸೋಲು ಕಾಣದ, ಗೆಲ್ಲಲು ಯಾವುದೇ ಕಾನೂನನ್ನು ಮುರಿಯುವ ಅವನಿಗೆ ವಕೀಲಿಕೆ ಎಂದರೆ ಅಧಿಕಾರ, ಪ್ರಭಾವ ಮತ್ತು ನಿಯಂತ್ರಕ ಶಕ್ತಿ.  

ಇದರ ತದ್ವಿರುದ್ಧ ಭಾರ್ಗವಿ. ನ್ಯಾಯ ದೊರಕಿಸಿ ಕೊಡಬೇಕಾದ ಸಂಧರ್ಭ ಬಂದಾಗ ಅವಳು ಯಾರನ್ನಾದರೂ ಎದುರಿಸಬಲ್ಲವಳು. ಅಧಿಕಾರ, ಹಣ, ಪ್ರಭಾವ ಇದ್ಯಾವುದಕ್ಕೂ ಕಿಂಚಿತ್ತೂ ಬೆಲೆ ಕೊಡದ ಅವಳು ನ್ಯಾಯಪರ, ಯಾರಿಗೂ ಹೆದರದ ದಿಟ್ಟ ಯುವತಿ. ತನ್ನ ಪ್ರೀತಿಯ ಅಪ್ಪ ಅಮ್ಮ ಮತ್ತು ತನ್ನ ಪುಟ್ಟ ಕುಟುಂಬವೇ ಅವಳ ಜೀವನ. ಭಾರ್ಗವಿಯ ಅಪ್ಪ ರವೀಂದ್ರ ಭಟ್ಕಳ್ ಕೂಡಾ ವಕೀಲನಾಗಿದ್ದು ವೃತ್ತಿಯಲ್ಲಿ ಯಶಸ್ಸು ಕಂಡಿರುವುದಿಲ್ಲ. ಮಗಳ ಕನಸಿಗೆ ತಂದೆ ಪೂರ್ತಿಯಾಗಿ ಬೆಂಬಲ ನೀಡಿದರೂ ಅಮ್ಮನಿಗೆ ಮಾತ್ರ ಲಾಯರ್ ವೃತ್ತಿ ಅನಗತ್ಯ ತೊಂದರೆಗಳನ್ನು ತರಬಹುದು ಎಂಬ ಆತಂಕ. ಮದುವೆಯಾಗಿ ಅವಳು ಸುಖವಾಗಿದ್ದರೆ ಸಾಕು ಅನ್ನುವುದು ಅಮ್ಮನ ಬಯಕೆ. ಭಾರ್ಗವಿಯ ಜೀವನ ಅನೀರೀಕ್ಷಿತ ತಿರುವು ಪಡೆಯುವುದು ಅವಳು, ಜೆಪಿ ಪಾಟೀಲ್ ನ ಮಗ ಅರ್ಜುನ್ ಪಾಟೀಲ್ ನನ್ನು ಭೇಟಿ ಮಾಡಿದಾಗ. ಶ್ರೀಮಂತ ಕುಟುಂಬದಲ್ಲಿ  ಬೆಳೆದರೂ ಸಹೃದಯಿಯಾಗಿರುವ ಅರ್ಜುನ್ ಭಾರ್ಗವಿಯನ್ನು ಮೊದಲ ನೋಟದಲ್ಲೇ ಪ್ರೀತಿಸುತ್ತಾನೆ. ತನ್ನ ತಂದೆ ವಿರುದ್ಧ ಹೋರಾಟ ಮಾಡುತ್ತಿರುವ ವಕೀಲೆ ಎಂಬ ಅರಿವಿರದ ಅರ್ಜುನ್ ಭಾರ್ಗವಿಗೆ ಹತ್ತಿರವಾಗುತ್ತಾನೆ. ಇಂಥ ಸನ್ನಿವೇಶದಲ್ಲಿ ತನ್ನ ತಂದೆಯ ಗೌರವವನ್ನು ಮರಳಿ ಗಳಿಸಲು ಮತ್ತು ಅನ್ಯಾಯದ ವಿರುದ್ಧ ಹೋರಾಡಿ ಗೆಲ್ಲಲು ಭಾರ್ಗವಿ ಯಶಸ್ವಿಯಾಗುತ್ತಾಳಾ ಎನ್ನುವುದು ‘ಭಾರ್ಗವಿ LL.B.’ಯ ಮುಖ್ಯ ಕಥಾಹಂದರವಾಗಿದೆ. ‘ಭಾರ್ಗವಿ  LL.B’ -ಸಾಮಾಜಿಕ ಸಂಘರ್ಷ ಮತ್ತು ಕೌಟುಂಬಿಕ ಕಥನ ಹೊಂದಿರುವ ಅತ್ಯಂತ ಶಕ್ತಿಶಾಲಿಯಾಗಿ ನಿರೂಪಿತವಾಗಿರುವ ಎಲ್ಲರೂ ನೋಡಲೇಬೇಕಾದ ಧಾರಾವಾಹಿಯಾಗಿದೆ. ದಿಟ್ಟ ಭಾರ್ಗವಿ ಪಾತ್ರದಲ್ಲಿ ರಾಧಾ ಭಗವತಿ, ಅರ್ಜುನ್ ಪಾಟೀಲ್ ಪಾತ್ರದಲ್ಲಿ ಮನೋಜ್ ಕುಮಾರ್ ಕನ್ನಡ ಟೆಲಿವಿಶನ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.  

ಜೆಪಿ ಪಾಟೀಲ್ ಪಾತ್ರದಲ್ಲಿ ರಂಗಭೂಮಿಯ ಪ್ರಸಿದ್ಧ ಕಲಾವಿದ ಕೀರ್ತಿ ಭಾನು, ಹಾಗೂ ಕನ್ನಡದ ಖ್ಯಾತ ಕಲಾವಿದರಾದ ಅರುಣಾ ಬಾಲರಾಜ್,  ಹನುಮಂತೇ ಗೌಡ,  ಸುಜಾತಾ ಅಕ್ಷಯ, ’ಮಾಯಾಬಜಾರ್‌’ ಖಾತಿಯ ಚೈತ್ರಾ ರಾವ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ’ಅಂತರಪಟ’ ಧಾರಾವಾಹಿ ಮೂಲಕ ಶಕ್ತಿಶಾಲಿ ಮಹಿಳಾ ಪಾತ್ರ ಗಳನ್ನು ತೆರೆಗೆ ತಂದವರು ನಿರ್ಮಾಪಕಿ ಸ್ವಪ್ನ ಕೃಷ್ಣ,   ‘ಭಾರ್ಗವಿ  LL.B.’ ಮೂಲಕ ಮತ್ತೊಂದು ಮಹಿಳಾ ಪ್ರಧಾನ ಧಾರಾವಾಹಿಯನ್ನು ಮುಂದಿಡುತ್ತಿದ್ದಾರೆ. "ಮುಂಗಾರು ಮಳೆ" ಕೃಷ್ಣ ಈ ಶೋಗೆ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಸಂಗೀತ ರಚನೆ ಮತ್ತು ಗಾಯನ ಶಶಾಂಕ್ ಶೇಷಗಿರಿ ಅವರದು, ಹಾಗೂ ಪ್ರಮೋದ ಮರವಂತೆ ಮನಸಿಗೆ ಮುಟ್ಟುವಂತಹ ಸಾಹಿತ್ಯ ರಚಿಸಿದ್ದಾರೆ. ಯಾರಿಗೂ ಹೆದರದ, ಅನ್ಯಾಯಕ್ಕೆ ತಲೆ ಬಾಗದ, ನ್ಯಾಯದ ಹಾದಿಯಲ್ಲಿ ತನ್ನ ತಂದೆಯ ಗೌರವ ಮರಳಿಗಳಿಸಲು ತನ್ನದೇ ಛಾಪು ಮೂಡಿಸಬೇಕು ಅನ್ನುವ  ಭಾರ್ಗವಿ  LL.B.’ ಯು ಅತ್ಯಂತ ಬಿಗಿಯಾದ ನಿರೂಪಣೆ ಮತ್ತು ಪ್ರಬಲ ತಾರಾಗಣದಿಂದ ಜನರಿಗೆ ಅತ್ಯಂತ ಆಪ್ತವಾಗುವ ಧಾರಾವಾಹಿ. ಮಾರ್ಚ್‌ 3 ರಿಂದ ಸೋಮವಾರ-ಶುಕ್ರವಾರ ರಾತ್ರಿ 8:30ಕ್ಕೆ  ಕಲರ್ಸ್‌ ಕನ್ನಡದಲ್ಲಿ  ನ್ಯಾಯಕ್ಕಾಗಿ ಹೋರಾಡುವ ದಿಟ್ಟ  ’ಭಾರ್ಗವಿ  LL.B.’ಯ ಸ್ವಾಭಿಮಾನದ ಸಂಘರ್ಷದ ಕತೆ  ತಪ್ಪದೆ ನೋಡಿ!