ಬೆಂಗಳೂರು, ಮೇ 3,ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ. 30 ಲಕ್ಷ ಆರೋಗ್ಯ ವಿಮೆ ಜಾರಿ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಐಟಿಯುಸಿ ಅಂಗನವಾಡಿ ಫೆಡರೇಷನ್ ಧನ್ಯವಾದ ಸಲ್ಲಿಸಿದೆ.ಕಳೆದ ಏಪ್ರಿಲ್ 16 ರಂದು ಫೆಡರೇಷನ್ ವತಿಯಿಂದ ಆರೋಗ್ಯವಿಮೆ ಸೌಲಭ್ಯ ಒದಗಿಸುವಂತೆ ಮನವಿ ಮಾಡಲಾಗಿತ್ತು. ಅಂತೆಯೇ ಏಪ್ರಿಲ್ 20ರಂದು ಇಲಾಖೆ ಸಚಿವರು ಕೂಡ ಕಾರ್ಯಕರ್ತರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು.ಏಪ್ರಿಲ್ 30 ರಂದು ನಡೆದ ರಾಜ್ಯ ಸಚಿವ ಸಂಪುಟ ಕೊರೋನಾ ವೈರಾಣು ನಿಯಂತ್ರಣಕ್ಕಾಗಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕೊರೋನಾ ಸೋಂಕು ತಗುಲಿ ಜೀವಹಾನಿಯಾದರೆ 30 ಲಕ್ಷ ರೂಪಾಯಿಗಳ ಪರಿಹಾರಕ್ಕೆ ಅನುಮೋದನೆ ನೀಡಿದ್ದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ತಿಳಿಸಿದ್ದಾರೆ. ಅಲ್ಲದೇ ಏ.30ರಂದು ಅಪಘಾತಕ್ಕೀಡಾಗಿ ಶಿವಮೊಗ್ಗ ಮೆಟ್ರೋ ಆಸ್ಪತ್ರೆಯಲ್ಲಿ ತುರ್ತು ನಿಗಾ ವಾರ್ಡ್‌ನಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆ ಪ್ರೇಮ ಅವರ ಚಿಕಿತ್ಸೆಗೆ ಹಾಗೂ ಇನ್ನಿತರ ಖರ್ಚಿಗಾಗಿ ಹಣ ಸಹಾಯ ಮಾಡುವಂತೆ ಕೋರುತ್ತೇವೆ. ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಆದ್ದರಿಂದ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಜಯಮ್ಮ ಮನವಿ ಮಾಡಿದ್ದಾರೆ.