ಬೆಂಗಳೂರು, ಆಗಸ್ಟ್ 11 ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ರಸ್ತೆ ಮತ್ತು ರೈಲು ಸೇವೆಗಳು ಸ್ಥಗಿತಗೊಂಡಿದ್ದು, ಪರಿಸ್ಥಿತಿಯ ಲಾಭ ಪಡೆಯುತ್ತಿರುವ ವಿಮಾನಯಾನ ಸಂಸ್ಥೆಗಳು ಕರ್ನಾಟಕದ ಕರಾವಳಿ ಕೇಂದ್ರವಾದ ಬಂದರು ನಗರಿ ಮಂಗಳೂರಿಗೆ ಪ್ರಯಾಣ ಶುಲ್ಕವನ್ನು ಹೆಚ್ಚಿಸಿವೆ. ಮೂಲಗಳ ಪ್ರಕಾರ, ಬೆಂಗಳೂರು ಮತ್ತು ಮಂಗಳೂರು ನಡುವಿನ ವಿಮಾನಗಳ ಟಿಕೆಟ್ಗಳು 14000 ರೂ.ನಿಂದ 18000 ರೂ.ವರೆಗೆ ತಲುಪಿದೆ. ಈ ಮೊದಲು ಶುಲ್ಕ 2500 ರೂ.ಗಳಿಂದ 5000 ರೂ.ಇತ್ತು. ಸರ್ಕಾರದಿಂದ ಯಾವುದೇ ನಿಯಂತ್ರಣವಿಲ್ಲದ ಕಾರಣ ವಿಮಾನಯಾನ ಸಂಸ್ಥೆಗಳು ಪ್ರಾಕೃತಿಕ ವಿಪತ್ತಿನ ಲಾಭ ಪಡೆದು ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿವೆ ಎಂದು ಬೆಂಗಳೂರಿನಿಂದ ಮಂಗಳೂರಿಗೆ ಆಗಾಗ್ಗೆ ಪ್ರಯಾಣಿಸುವ ಸುರೇಶ್ ಯುಎನ್ಐಗೆ ತಿಳಿಸಿದರು. ರಾಜ್ಯದ ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಮಳೆ ಬೀಳುತ್ತಿರುವುದರಿಂದ, ಹಲವಾರು ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಲ್ಲಿನ ಸೇತುವೆಗಳು ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಹಲವೆಡೆ ಸಂಚಾರ ಸ್ಥಗಿತಗೊಂಡಿದೆ. ಮಂಗಳೂರು ವಿಭಾಗದಲ್ಲಿ ಹಳಿ ಮೇಲೆ ಭೂಕುಸಿತ ಮತ್ತು ನೀರು ನಿಂತಿರುವುದರಿಂದ ಮಂಗಳೂರು ಮತ್ತು ಬೆಂಗಳೂರು ನಡುವಿನ ಎಲ್ಲಾ ರೈಲು ಸೇವೆಗಳನ್ನು ಆಗಸ್ಟ್ 23ರವರೆಗೆ ರದ್ದುಪಡಿಸಲಾಗಿದೆ.