ಉದ್ಯಮಿ ವೀರೇಶಗೌಡರಿಂದ ಮಕ್ಕಳಿಗೆ 700 ಶಾಲಾ ಬ್ಯಾಗ್ ವಿತರಣೆ
ತಾಳಿಕೋಟೆ 08: ಮಗ ವೇದಾಂತಗೌಡನ ಮೊದಲ ವರ್ಷದ ಜನುಮದಿನದ ಆಚರಣೆಯಲ್ಲಿ ಲಕ್ಷಾಂತರ ಖರ್ಚು ಮಾಡಿ ಕಾರ್ಯಕ್ರಮ ಮಾಡಿದ್ದೆ. ಮಗನೀಗ ಐದು ವರ್ಷ, ಅವನ ಹುಟ್ಟು ಹಬ್ಬದ ಆಚರಣೆ ಅವನಿಗೆ ಮಾತ್ರ ಖುಷಿ ನೀಡುವಂತಾಗದೇ ನೂರಾರು ಇತರ ಮಕ್ಕಳಿಗೂ ಸಹಾಯವಾಗಬೇಕು ಎಂದು ಆಲೋಚಿಸಿದೆ. ಅದರಂತೆ ನಮ್ಮೂರು ಮಿಣಜಗಿಯಲ್ಲಿನ ಎರಡು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 462 ಮಕ್ಕಳಿಗೆ ಹಾಗೂ ಬಳಗಾನೂರಿನ ಸರ್ಕಾರಿ ಶಾಲೆಯ 247 ಮಕ್ಕಳಿಗೆ ಶಾಲಾಬ್ಯಾಗ್, ನೋಟ್ ಪುಸ್ತಕ, ಪೆನ್ನು ಮತ್ತು ಪೆನ್ಸಿಲ್ ಕಿಟ್ ಕೊಡುವ ವಿಚಾರ ಮಾಡಿ ಶಾಲಾ ಮಕ್ಕಳಿಗೆ ಸು.600 ರೂಪಾಯಿಗಳ ಮೌಲ್ಯದಲ್ಲಿ ಗುಣಮಟ್ಟದ 700ಕ್ಕೂ ಅಧಿಕ ಶಾಲಾಬ್ಯಾಗ್ ಕಿಟ್ ನೀಡಿದೆ ಎಂದು ಮಿಣಜಗಿಯ ಯುವ ಉದ್ಯಮಿ ವೀರೇಶಗೌಡ ಪಾಟೀಲ ಹೇಳಿದರು.
ಅವರು ತಾಲ್ಲೂಕಿನ ಬಳಗಾನೂರ ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲಾಬ್ಯಾಗ್ ವಿತರಣೆ ಮಾಡಿ ಮಾತನಾಡಿದರು. ನನ್ನ ಮಗನಿಗೆ ಎಲ್ಲ ಹಿರಿಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಆಶೀರ್ವಾದ ಸಿಕ್ಕರೆ ಅದಕ್ಕಿಂತ ಹೆಚ್ಚೇನು ಬೇಡ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕ ಆರ್.ಎಂ.ಮುರಾಳ ಪ್ರತಿಯೊಬ್ಬರೂ ತಮ್ಮ ಮಕ್ಕಳ ದಿನಾಚರಣೆಯನ್ನು ಅದ್ದೂರಿ ಮಾಡಬಯಸುವವರು ಹೀಗೆ ಸಾಮಾಜಿಕ ಉಪಯೋಗವಾಗುವಂತೆ ಮಾಡಬೇಕು ಅದರಿಂದ ಸರ್ಕಾರಿ ಶಾಲೆಯಲ್ಲಿ ಓದುವ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಸಹಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿದ್ದ ಮಂಜುಳಾ ತಾಯಿ ಶರಣರು, ಶಿಕ್ಷಕ ರಾಜ್ಯ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ತಾಲ್ಲೂಕಾ ಘಟಕದ ಅಧ್ಯಕ್ಷ ಬಿ.ಟಿ.ವಜ್ಜಲ, ಮಿಣಜಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹೂವಪ್ಪಗೌಡ ಬಿರಾದಾರ, ಹಾಲಿ ಸದಸ್ಯರಾದ ಚಂದ್ರಶೇಖರ ಅಲದಿ, ರಾಮನಗೌಡ ದೋರನಳ್ಳಿ, ಅಂಬರೀಷಗೌಡ ಪಾಟೀಲ, ಮಾಂತಗೌಡ ಬಿರಾದಾರ ಇತರರಿದ್ದರು