ಷರತ್ತುಗಳೊಂದಿಗೆ ಕೈಗಾರಿಕಾ ಚಟುವಟಿಕೆಗಳ ಪುನಾರಂಭ: ಜಗದೀಶ ಶೆಟ್ಟರ್

ಧಾರವಾಡ, ಏ.29, ಕೊರೊನಾ ನಿಯಂತ್ರಿಸಲು ದೇಶದಾದ್ಯಂತ ಪ್ರಕರಣಗಳನ್ನು  ಆಧರಿಸಿ ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಳದಿ ಮತ್ತು ಹಸಿರು ಎಂದು ನಾಲ್ಕು  ವಲಯಗಳನ್ನಾಗಿ ವಿಂಗಡಿಸಲಾಗಿದೆ. ಧಾರವಡ ಜಿಲ್ಲೆಯು ಕಿತ್ತಳೆ ವಲಯದಲ್ಲಿದೆ ಹುಬ್ಬಳ್ಳಿ  ಶಹರ ಹೊರತುಪಡಿಸಿ ,ಧಾರವಾಡ ನಗರದಲ್ಲಿ ಕೆಲವು ಷರತ್ತುಗಳೊಂದಿಗೆ ಹಾಗೂ ಜಿಲ್ಲೆಯಾದ್ಯಂತ  ಇತರ ತಾಲ್ಲೂಕುಗಳು ಮತ್ತು  ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೇವೆಗಳ ಅಂಗಡಿ  ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು ಸೂಕ್ತ ಆರೋಗ್ಯ  ಮುಂಜಾಗ್ರತಾ ಕ್ರಮಗಳೊಂದಿಗೆ ಇದರ ಸದುಪಯೋಗ ಪಡೆಯಬೇಕು ಎಂದು ಬೃಹತ್, ಮಧ್ಯಮ ಕೈಗಾರಿಕೆ  ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.ಜಿಲ್ಲಾಧಿಕಾರಿಗಳ  ಕಚೇರಿಯಲ್ಲಿಂದು ಲಾಕ್‍ಡೌನ್ ವಿನಾಯಿತಿಗಳ ಕುರಿತು ಜಿಲ್ಲೆಯ ಶಾಸಕರು ಮತ್ತು ಹಿರಿಯ  ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ  ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ನಿರ್ಣಯಿಸಿದಂತೆ ,  ಧಾರವಾಡ ಜಿಲ್ಲೆಯನ್ನು ಕಿತ್ತಳೆ ವಲಯದಲ್ಲಿ ಬರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು  ಪರಿಶೀಲನೆ ನಡೆಸಿ ಲಾಕ್‍ಡೌನ್ ವಿನಾಯಿತಿಗಳ ಬಗ್ಗೆ ನಿರ್ಧರಿಸಲು ಸೂಚಿಸಲಾಗಿದೆ.  ಜಿಲ್ಲೆಯ ಹುಬ್ಬಳ್ಳಿ ಶಹರದಲ್ಲಿ ಮಾತ್ರ ಕೋವಿಡ್ ಸಕ್ರಿಯ ಪ್ರಕರಣಗಳು ಇವೆ. ಹುಬ್ಬಳ್ಳಿ  ಶಹರದಲ್ಲಿ ಪ್ರಸ್ತುತ ಇರುವ ಎಲ್ಲಾ ನಿರ್ಬಂಧಗಳು ಯಥಾರೀತಿಯಲ್ಲಿ ಮುಂದುವರೆಯಲಿವೆ ಎಂದರು.
ಧಾರವಾಡದಲ್ಲಿ ಪ್ರಾರಂಭದಲ್ಲಿ ಕಾಣಿಸಿಕೊಂಡಿದ್ದ ಒಂದು ಕೋವಿಡ್ ಪ್ರಕರಣ  ಗುಣಮುಖವಾಗಿದೆ, ನಿಯಮಾನುಸಾರ ಕಂಟೇನ್‍ಮೆಂಟ್ ಪ್ರದೇಶವನ್ನೂ ಸಹ ನಿರ್ಬಂಧಗಳಿಂದ  ಮುಕ್ತಗೊಳಿಸಲಾಗಿದೆ. ಈ ಕಾರಣಕ್ಕಾಗಿ ಧಾರವಾಡ ನಗರದಲ್ಲಿ ಮಾತ್ರ ಸೋಮವಾರ, ಮಂಗಳವಾರ  ,ಬುಧವಾರ ಹಾಗೂ ಗುರುವಾರ ದಿನಗಳಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ  ಅಂಗಡಿ ಮತ್ತು ಮುಂಗಟ್ಟುಗಳ ಕಾಯ್ದೆ ( ಶಾಪ್ಸ್ ಮತ್ತು ಎಸ್ಟಾಬ್ಲಿಷ್‍ಮೆಂಟ್ ಆ್ಯಕ್ಟ್)  ಪ್ರಕಾರ ನೋಂದಣಿಯಾಗಿರುವ ಕೃಷಿ ಮತ್ತು ಕೈಗಾರಿಕೆ ಪೂರಕವಾಗಿರುವ ವ್ಯಾಪಾರ  ವಹಿವಾಟುಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.ಇದೇ ರೀತಿಯಾಗಿ ಜಿಲ್ಲೆಯ ಕುಂದಗೋಳ, ನವಲಗುಂದ, ಅಣ್ಣಿಗೇರಿ,ಕಲಘಟಗಿ  ಹಾಗೂ ಅಳ್ನಾವರ ತಾಲ್ಲೂಕು ಕೇಂದ್ರಗಳು ಹಾಗೂ ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ  ಪ್ರಕರಣಗಳು ಇಲ್ಲದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚಿಸಿರುವ  ನಿಯಮಗಳನುಸಾರ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಮುಕ್ತವಾಗಿ  ಎಂದಿನಂತೆ ವ್ಯಾಪಾರ, ವಹಿವಾಟುಗಳನ್ನು ನಡೆಸಬಹುದು ಎಂದರು.
ಕಾಮಗಾರಿಗಳ  ಪುನರಾರಂಭ ; ಲೋಕೋಪಯೋಗಿ ,ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್‍ರಾಜ್, ಗ್ರಾಮಿಣ ಕುಡಿಯುವ ನೀರು,ಸಣ್ಣ ನೀರಾವರಿ, ಮಹಾತ್ಮ ಗಾಂಧಿ ನರೇಗಾ  ಯೋಜನೆಗಳು ಹಾಗೂ ಕಳೆದ ಸಾಲಿನಲ್ಲಿ ಅನುಮೋದಿಸಲ್ಪಟ್ಟಿರುವ ಶಾಸಕರ ಸ್ಥಳೀಯ  ಪ್ರದೇಶಾಭಿವೃದ್ಧಿ ನಿಧಿಯ  ಎಲ್ಲಾ ಚಾಲ್ತಿ ಕಾಮಗಾರಿಗಳನ್ನು ಮುಂದುವರೆಸಬಹುದು.  ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂಟೇನ್ಮಮೆಂಟ್ ಪ್ರದೇಶ  ಹೊರತುಪಡಿಸಿ ಪಾಲಿಕೆಯ ಅಪೆಂಡಿಕ್ಸ್ –ಇ, 14 ನೇ ಹಣಕಾಸು ಯೋಜನೆಯಡಿ ಕೈಗೊಳ್ಳಬಹುದಾದ  ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ವಾನುಮತಿಯೊಂದಿಗೆ ಕೈಗೊಳ್ಳಬಹುದಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಷರತ್ತುಗಳೊಂದಿಗೆ  ಕೈಗಾರಿಕಾ ಚಟುವಟಿಕೆಗಳ ಪುನರಾರಂಭ : ಅಗತ್ಯ ವಸ್ತುಗಳಡಿಯಲ್ಲಿ ಬರುವ ಎಲ್ಲಾ  ಕೈಗಾರಿಕಾ  ಚಟುವಟಿಕೆಗಳನ್ನು ಹುಬ್ಬಳ್ಳಿ ನಗರ ಹೊರತುಪಡಿಸಿ , ಅವಳಿನಗರದ ಹೊರವಲಯ  ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಮಭಿಸಬಹುದು. ಉದ್ಯಮ ಸಂಸ್ಥೆಗಳ ಮಾಲಿಕರು ಶೇ.50  ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಅವರಿಗೆ, ಮಾಸ್ಕ್,ಹ್ಯಾಂಡ್ ಸ್ಯಾನಿಟೈಸರ್ ಹಾಗೂ  ಸಾಮಾಜಿಕ ಅಂತರದ ನಿಯಮಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಜಿಲ್ಲಾ  ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಕೈಗಾರಿಕಾ ಚಟುವಟಿಕೆಗಳಲ್ಲಿ ನಿಯಮಗಳ ಪಾಲನೆಯ  ಬಗ್ಗೆ ನಿಗಾವಹಿಸಬೇಕು ಎಂದು ಶೆಟ್ಟರ್ ಸೂಚಿಸಿದರು.ನಿರ್ಬಂಧ ಮುಂದುವರಿಕೆ: ಲಾಕ್‍ಡೌನ್ ಜಾರಿಯಾದಾಗಿನಿಂದ ನಿರ್ಬಂಧಿಸಿರುವ ಸಾರ್ವಜನಿಕ ಸಾರಿಗೆ ಸೌಲಭ್ಯ ಇರುವುದಿಲ್ಲ, ಪಬ್, ಬಾರ್, ರೆಸ್ಟೋರೆಂಟ್, ಮಾಲ್, ಶಾಪಿಂಗ್  ಕಾಂಪ್ಲೆಕ್ಸ್, ಸಿನೆಮಾ ಮಂದಿರ, ಕಲ್ಯಾಣ ಮಂಟಪ, ಎಲ್ಲಾ ಧಾರ್ಮಿಕ ಪ್ರಾರ್ಥನಾ  ಮಂದಿರಗಳನ್ನು ತೆರೆಯಲು ಅವಕಾಶವಿಲ್ಲ. ಹೊಟೆಲ್‍ಗಳ ಮೂಲಕ ಪಾರ್ಸೆಲ್ ವಿತರಿಸಲು ಮಾತ್ರ  ಅವಕಾಶವಿದೆ ಎಂದು ಅವರು ಹೇಳಿದರು.
ಸಾರ್ವಜನಿಕರಲ್ಲಿ ಮನವಿ: ಸರ್ಕಾರದ  ಸೂಚನೆಯಂತೆ ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಿ, ಹಲವಾರು ವಿನಾಯಿತಿಗಳನ್ನು  ಸಾರ್ವಜನಿಕರಿಗೆ ನೀಡಲಾಗಿದೆ. ಮುಂಗಾರು ಪ್ರಾರಂಭವಾಗುವುದರಿಂದ ಕೃಷಿ ಮತ್ತು ಪೂರಕ  ಚಟುವಟಿಕೆಗಳು,ಆಸ್ಪತ್ರೆ, ಕಟ್ಟಡ ನಿರ್ಮಾಣ ಕಾರ್ಯ ಸೇರಿದಂತೆ ವಿವಿಧ ಕಾರಣಗಳಿಗಾಗಿ  ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ಬರುವ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ  ಪರಿಸ್ಥಿತಿಗೆ ಅನುಗುಣವಾಗಿ ಜನ,ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು  ಜಿಲ್ಲಾಡಳಿತ ಮತ್ತು ಪೊಲೀಸರೊಂದಿಗೆ ಸಂಯಮದಿಂದ ವರ್ತಿಸಿ ಸಹಕಾರ ನೀಡಬೇಕೆಂದು ಸಚಿವರು  ಮನವಿ ಮಾಡಿದರು.ಶಾಸಕರಾದ ಪ್ರಸಾದ ಅಬ್ಬಯ್ಯ,ಅಮೃತ ದೇಸಾಯಿ,ಸಿ.ಎಂ.ನಿಂಬಣ್ಣವರ, ಕುಸುಮಾವತಿ  ಶಿವಳ್ಳಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಆಯುಕ್ತ ಆರ್.ದಿಲೀಪ್, ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿಪಂ ಸಿಇಓ ಡಾ.ಬಿ.ಸಿ.ಸತೀಶ,  ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು  ಸಭೆಯಲ್ಲಿ ಉಪಸ್ಥಿತರಿದ್ದರು.