ಬೆಂಗಳೂರು, ಏ.24, ನಟಸಾರ್ವಭೌಮ, ಕರ್ನಾಟಕ ರತ್ನ ಡಾ.ರಾಜ್‌ಕುಮಾರ್, ತನ್ನ ನಟನೆಯಿಂದ ಮಾತ್ರವಲ್ಲ, ನಮ್ಮ ನೆಲ-ಜಲ-ಭಾಷೆ ಬಗೆಗಿನ ಪ್ರೀತಿ-ಅಭಿಮಾನ-ಬದ್ಧತೆಯಿಂದಲೂ ನಮಗೆ ಪ್ರಾತ:ಸ್ಮರಣೀಯರು. ಅವರ ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಡಲು ಪ್ರಯತ್ನ ಪಡುವುದೇ ಅವರ ಹುಟ್ಟುಹಬ್ಬದ ದಿನ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೌರವ ಸಲ್ಲಿಸಿದ್ದಾರೆ.ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕೂಡ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಕನ್ನಡದ ಕಣ್ಮಣಿ, ವರನಟ, ದಿವ್ಯಚೇತನ ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಮ್ಮ ಪಾಲಿಗೆ ಡಾ. ರಾಜ್ ಕುಮಾರ್ ಅನ್ನೋದು ಕೇವಲ ಹೆಸರಾಗಷ್ಟೇ ಉಳಿದಿಲ್ಲ, ಸಮಸ್ತ ಕರುನಾಡಿನ ಸಾಕ್ಷಿಪ್ರಜ್ಞೆಯ ಪ್ರತೀಕ. ಅವರು ಕನ್ನಡ ನಾಡಿನ ಸಂತ. ತಮ್ಮ ಸಿನಿಮಾಗಳ ಮೂಲಕ, ನಿಜ ಬದುಕಿನ ಮೂಲಕ ಒಂದು ಆದರ್ಶಮಯ ಬದುಕನ್ನು ತೋರಿಸಿಕೊಟ್ಟವರು. ಸಿನಿಮಾಗಳ ಮೂಲಕ ಅಸಂಖ್ಯಾತ ಜನರನ್ನು ರಂಜಿಸಿದ ಅದರಾಚೆಗೂ ಜನ ಜೀವನವನ್ನು ಪ್ರಭಾವಿಸಿದವರು. ಹೀಗಾಗಿಯೇ ರಾಜ್ ಎಂದರೆ ಯಾವ ಸ್ಕೂಲೂ, ಕಾಲೇಜುಗಳು ಕಲಿಸದ ಜೀವನ ಪಾಠ ಕಲಿಸಿ ಕೊಟ್ಟ ವಿಶ್ವವಿದ್ಯಾಲಯ ಎಂದು ಸ್ಮರಿಸಿದ್ದಾರೆ.