ನವದೆಹಲಿ 29: ಪಹಲ್ಗಾಮ್ ಭಯೋತ್ಪಾದಕ ದಾಳಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಆದಷ್ಟು ಬೇಗ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ.
ಪತ್ರದ
ಪ್ರತಿಯನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 'ಈ ನಿರ್ಣಾಯಕ ಸಮಯದಲ್ಲಿ,
ಭಯೋತ್ಪಾದನೆಯ ವಿರುದ್ಧ ನಾವು ಯಾವಾಗಲೂ ಒಟ್ಟಾಗಿ ನಿಲ್ಲುತ್ತೇವೆ' ಎಂಬುವುದನ್ನು ಭಾರತ ತೋರಿಸಬೇಕು ಎಂದು ಹೇಳಿದ್ದಾರೆ.
'ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ. ಈ ನಿರ್ಣಾಯಕ ಸಮಯದಲ್ಲಿ,
ಭಯೋತ್ಪಾದನೆಯ ವಿರುದ್ಧ ನಾವು ಯಾವಾಗಲೂ ಒಗ್ಗಟ್ಟಾಗಿ ನಿಲ್ಲುತ್ತೇವೆ ಎಂಬುವುದನ್ನು ಭಾರತ ತೋರಿಸಬೇಕು. ಇದಕ್ಕಾಗಿ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂಬುವುದು ವಿರೋಧ ಪಕ್ಷಗಳ ಆಗ್ರಹ. ಅಲ್ಲಿ ಜನ ಪ್ರತಿನಿಧಿಗಳು ತಮ್ಮ
ಏಕತೆ ಮತ್ತು ಬದ್ಧತೆಯನ್ನು ಪ್ರದರ್ಶಿಸಬಹುದು. ಹಾಗಾಗಿ ಆದಷ್ಟು ಬೇಗ ವಿಶೇಷ ಅಧಿವೇಶನ ಕರೆಯಬೇಕೆಂದು ನಾವು ಮನವಿ ಮಾಡುತ್ತೇವೆ' ಎಂದು ಪತ್ರದಲ್ಲಿ ಬರೆದಿದ್ದಾರೆ.