ಕಾಳಿ ನದಿ ನೀರಿನೊಳಗೆ ನಿರ್ಮಿಸಿರುವ ಸ್ಟ್ರಕ್ಚರ್ ಹೈಕೋರ್ಟ್ ಆದೇಶವಿದ್ದರೂ ತೆರವುಗೊಳಿಸಿಲ್ಲ
ಕಾರವಾರ 23: ಜೊಯಿಡಾ ತಾಲೂಕಿನ ಬಾಡಗುಂದ ಗ್ರಾಮದಲ್ಲಿರುವ ವಿಸ್ಲಿಂಗ್‌ವುಡ್ ರೆಸಾರ್ಟನ ಒತ್ತುವರಿಯನ್ನು ತೆರವುಗೊಳಿಸುವಂತೆ ಧಾರವಾಡದ ಹೈಕೋರ್ಟ್ ಪೀಠ ಅರಣ್ಯ ಇಲಾಖೆಗೆ ಈಚೆಗೆ ಆದೇಶಿಸಿತ್ತು. ಈ ಆದೇಶದ ಅನ್ವಯ ಅರಣ್ಯ ಇಲಾಖೆ ಕಾರ್ಯ ಪ್ರವೃತ್ತವಾಗಿ, ತನಗೆ ಸೇರಿದ ಅರಣ್ಯ ಭೂಮಿ ಖುಲ್ಲಾಪಡಿಸಿದೆ. ಆದರೆ ನದಿ ದಂಡೆಯ ಅತಿಕ್ರಮಣದ 19 ಗುಂಟೆ ತೆರವು ಕಂದಾಯ ಇಲಾಖೆಗೆ ಸೇರಿದ್ದು, ಅದನ್ನು ನೀವೇ ತೆರವು ಮಾಡಿ ಎಂದು ಕಂದಾಯ ಅಧಿಕಾರಿಗೆ ಪತ್ರ ಬರೆದು ಕುಳಿತಿದೆ. ನದಿ ಪಾತ್ರದ ಅತಿಕ್ರಮಣ ತೆರವಿಗೆ ಹಿಂದೇಟು ಹಾಕಿರುವುದು ಎದ್ದು ಕಾಣುವಂತಿದೆ.
ರಾಜ್ಯ ಉಚ್ಚ ನ್ಯಾಯಾಲಯದ ದ್ವಿ ಸದಸ್ಯ ಪೀಠ ವಿಸ್ಲಿಂಗ್‌ವುಡ್ ಮಾಲೀಕರಾದ ಸ್ಮಿತಾ ವಿನಾಯಕ ಜಾಧವ ಅವರ ಮೇಲ್ಮನವಿಯನ್ನು ತಿರಸ್ಕರಿಸಿ ಅವರ ರೆಸಾರ್ಟ ಪಕ್ಕದ ಅರಣ್ಯ ಹಾಗು ಕಂದಾಯ ಇಲಾಖೆಗೆ ಸೇರಿದ 5 ಎಕರೆ ಹೆಚ್ಚು ಒತ್ತುವರಿಯಾಗಿದ್ದ ಜಮೀನಿನ ನಕ್ಷೆ ಬಿಡಿಸಿ, ಗುರುತು ಹಾಕಿ, ತೆರವುಗೊಳಿಸಲು ಆದೇಶಿಸಿತ್ತು. ರೆಸಾರ್ಟಗೆ ತೆರಳುವ ದಾರಿ ಮಾತ್ರ ಬಿಟ್ಟು, ಅತಿಕ್ರಮಣ ಖುಲ್ಲ ಮಾಡಿ, ಬೇಲಿ ಹಾಕುವಂತೆ ಅರಣ್ಯ ಇಲಾಖೆಗೆ ನಿರ್ದೆಶನ ನೀಡಿತ್ತು. ರೆಸಾರ್ಟ ಮಾಲೀಕರು ಅರಣ್ಯ ಇಲಾಖೆಯವರ ಖುಲ್ಲಾ ಪಡಿಸುವ ಕಾರ್ಯಕ್ಕೆ ಯಾವುದೇ ಅಡ್ಡಿ ಮಾಡದೇ ಸಹಕಾರ ನೀಡಬೇಕೆಂದು ಸೂಚಿಸಿತ್ತು. ತೆರವುಗೊಳಿಸುವ ಕಾರ್ಯ ಒಂದು ತಿಂಗಳೊಳಗಾಗಿ ಮುಗಿಸುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿತ್ತು.
ಈ ಆದೇಶದ ಹಿನ್ನೆಲೆಯಲ್ಲಿ ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸೂಚನೆಯಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ದಾಂಡೇಲಿ ವಲಯ ಅರಣ್ಯ ಅಧಿಕಾರಿ ಹಾಗು ಸಿಬ್ಬಂದಿಗಳು ಅರಣ್ಯ ಇಲಾಖೆಗೆ ಸೇರಿದ ಎಲ್ಲ ಒತ್ತುವರಿ ಜಾಗೆಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಿ, ಸಿಮೆಂಟ್ ಕಾಂಕ್ರೀಟ್ ಆವಾರ ಗೋಡೆಗಳನ್ನು ನಿರ್ಮಿಸಿದ್ದಾರೆ. ಆದರೆ ಕಾಳಿನದಿ ದಂಡೆಯ 19 ಗುಂಟೆ ಜಾಗೆ ಹಾಗು ನದಿಯೊಳಗೆ ನಿರ್ಮಿಸಿರುವ ಕಾಂಕ್ರಿಟ್ ಫಿಲ್ಲರುಗಳ ಮೇಲಿನ ರೆಸ್ಟೋರೆಂಟ್ ಭಾಗದ ಸ್ಲ್ಯಾಬ್ ಗಳನ್ನು ಹಾಗೂ ಜಲಸಾಹಸ ಕ್ರೀಡೆಗೆ ನಿರ್ಮಿಸಿದ ಜಟ್ಟಿ, ಕೃತಕ ನೀರಿನ ಫಾಲ್ಸ್, ಪಾತ್ ವೇ ಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಇವುಗಳ ತೆರವಿಗೆ ಅರಣ್ಯ ಇಲಾಖೆ ಮುಂದಾಗಿಲ್ಲ. ಈ ಕಾರ್ಯ ಕಂದಾಯ ಇಲಾಖೆಗೆ ಸಂಬಂಧಿಸಿದ್ದು. ಅದು ಅವರ ಕೆಲಸ ಎನ್ನುವ ಉತ್ತರಅರಣ್ಯ ಅಧಿಕಾರಿಗಳದ್ದು. ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ರೆಸಾರ್ಟ ಮಾಲೀಕರು ತಾವಾಗಿಯೇ ತೆರವು ಮಾಡುತ್ತಾರೆಂದು ಹೇಳಿದ್ದಾರೆ ಎಂಬ ಉತ್ತರ ಬಂದಿದೆ. ಆದರೆ ರಾಜ್ಯ ಉಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ಒಂದು ತಿಂಗಳೊಳಗೆ ಅತಿಕ್ರಮಣ ತೆರವುಗೊಳಿಸುವ ಬಗ್ಗೆ ಸೂಚಿಸಿದೆ.
ಈಗ ಆ ಅವಧಿಯೂ ಮೀರಿ ಹೋಗಿದೆ. ಜಾವಾಬ್ದಾರಿಯನ್ನು ಒಬ್ಬರು, ಇನ್ನೊಬ್ಬರ ಮೇಲೆ ಹಾಕುತ್ತಾ ರೆಸಾರ್ಟನವರಿಗೆ ಅನುಕೂಲ ಮಾಡಿಕೊಟ್ಟಂತೆ ಭಾಸವಾಗುತ್ತಿದೆ. ಗಣೇಶಗುಡಿಯ ಇಳವಾದಿಂದ ಕದ್ದು ಮುಚ್ಚಿ ಮಿಡ್ ರಾ್ಯಪ್ಟಿಂಗ್ ನಡೆಸುತ್ತಿದ್ದು, ಇದೇ ಜಾಗೆಯಿಂದ ರಾಫ್ಟಿಂಗ್ ಬೋಟನ್ನು ಮೇಲಕ್ಕೆ ಎತ್ತುತ್ತಿದ್ದಾರೆ. ಆದರೆ ಇದು ಅರಣ್ಯ ಇಲಾಖೆಗೆ ಸೇರಿದ ಜಾಗೆಯಾಗಿದ್ದು ಅಲ್ಲಿಂದ ಅನಧಿಕೃತ ರಾಪ್ಟಿಂಗ್ ನಡೆಯುತ್ತಿದ್ದರೂ, ದಾಂಡೇಲಿ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಕ್ರಮ ಜರುಗಿಸದೇ ಮೌನವಾಗಿರುವದು ಏನನ್ನು ಸೂಚಿಸುತ್ತದೆ ? ಈಗ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ನದಿಯ ಪಾತ್ರದ ಅತಿಕ್ರಮಣ ಖುಲ್ಲಾ ಪಡಿಸುವಂತೆ ಮನವಿ ಮಾಡಿದೆಯಂತೆ. ಆದರೆ ಜೊಯಿಡಾ ತಹಶೀಲದಾರರು, ರೆಸಾರ್ಟ ಮಾಲೀಕರೇ ಅತಿಕ್ರಮಣ ತೆರವು ಮಾಡಿಕೊಡುತ್ತಾರೆಂದು ಕಾಯುತ್ತಿದ್ದಾರೆ. ಇವೆಲ್ಲವೂ ಹೊಂದಾಣಿಕೆಯಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಗಡವು ಮೀರಿದರೂ ಕಂದಾಯ ಅಧಿಕಾರಿಗಳು ನಿರಾಂತಕವಾಗಿ ಕುಳಿತಿದ್ದಾರೆ. ಸ್ಥಳೀಯ ಸಂಘಟನೆಯೊಂದು ಈ ಕುರಿತು ಹೈಕೋರ್ಟ್ ಗಮನಕ್ಕೆ ತರಲು ಮುಂದಾಗಿದೆ. ಅ ಷ್ಟರೊಳಗೆ ಜಿಲ್ಲಾಧಿಕಾರಿಗಳು ಕ್ರಮಕ್ಕೆ ಮುಂದಾಗುವ ಸಾಧ್ಯತೆ ಹೆಚ್ಚಾಗಿದೆ.
ಹೈಕೋರ್ಟ ಪೀಠದ ಆದೇಶದಂತೆ ಒತ್ತುವರಿಯಾದ ಅರಣ್ಯ ಇಲಾಖೆಯ ಭೂಮಿಯನ್ನೆಲ್ಲ ತೆರವುಗೊಳಿಸಿ ಬೇಲಿಯನ್ನು ಹಾಕಲಾಗಿದೆ. ನದಿಯ ದಂಡೆಯ ಪಾತ್ರದ 19 ಗುಂಟೆ ಜಾಗೆ, ನದಿಯೊಳಗಿನ ನಿರ್ಮಾಣಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೆವೆ.
-ಪ್ರಶಾಂತ. ಕೆ.
ಉಪಅರಣ್ಯ ಸಂರಕ್ಷಣಾಧಿಕಾರಿ,( ಹಳಿಯಾಳ ವಲಯ)