ಮಂಗಳೂರು, ಏ.19,ಮಾರ್ಚ್ 20 ರಂದು ಬೆಂಗಳೂರಿನಿಂದ ಮಂಗಳೂರಿಗೆ ಕೊರೊನಾ ಸೋಂಕು ದೃಢಪಟ್ಟ ಉಪ್ಪಿನಂಗಡಿ ಮೂಲದ 39 ವರ್ಷದ ವ್ಯಕ್ತಿಯು ಸಂಚರಿಸಿದ್ದು ಈ ಖಾಸಗಿ ಬಸ್‌ನಲ್ಲಿ ಸಂಚಾರ ಮಾಡಿದ್ದ ಎಲ್ಲಾ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಒಳಗಾಗಲು ದ. ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಖಾಸಗಿ ಕೆಲಸದ ಕಾರಣದಿಂದಾಗಿ ದೆಹಲಿಗೆ ಹೋಗಿದ್ದ ಈ ವ್ಯಕ್ತಿ ಮಾರ್ಚ್ 20 ರಂದು ಬೆಂಗಳೂರಿಗೆ ಬಂದಿದ್ದು ಅಲ್ಲಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಂಗಳೂರಿಗೆ ಭಾರತ್ ಟ್ರಾವೆಲ್ಸ್ (ಕೆ.ಎ.51 ಎಡಿ 5832) ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಬಸ್‌ನಲ್ಲಿ ಒಟ್ಟು 32 ಜನರು ಪ್ರಯಾಣಿಕರಿದ್ದು ಅವರೆಲ್ಲರೂ ಕೂಡಲೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.ಈ ಮಧ್ಯೆ ಸೋಂಕಿತ ವ್ಯಕ್ತಿಗಳು ಇರುವ ಪ್ರದೇಶವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತರ ಪತ್ತೆಯಾಗಿರುವ ಸಂಪ್ಯ, ಉಪ್ಪಿನಂಗಡಿ, ಕರಾಯ, ತೊಕ್ಕೊಟ್ಟು, ತುಂಬೆ, ಸಜಿಪನಡು, ಸುಳ್ಯದ ಅಜ್ಜಾವರ ಸೇರಿದಂತೆ ಜಿಲ್ಲೆಯ 7 ಗ್ರಾಮಗಳ ನಿರ್ದಿಷ್ಟ ಪ್ರದೇಶವನ್ನು ನಿಯಂತ್ರಿತ ವಲಯ ಎಂದು ಜಿಲ್ಲಾಧಿಕಾರಿ ಘೋಷಿಸಿದ್ದಾರೆ.