ಬೆಂಗಳೂರು, ಏ 25, ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಲಾಕ್ ಡೌನ್ ಜಾರಿಯಲ್ಲಿದೆ ಎಂಬುದನ್ನು ಮರೆತು ವಾಯುವಿಹಾರ ಮಾಡುತ್ತಿದ್ದ ಹಲವರಿಗೆ ಪೊಲೀಸರು ಪಾಠ ಮಾಡಿದ್ದಾರೆ.ಕೊರೊನಾ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನು ದೇಶಾದ್ಯಂತ ಲಾಕ್ ಡೌನ್ ಘೋಷಿಸುವ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮನೆಯಲ್ಲಿಯೇ ವ್ಯಾಯಾಮ ಮಾಡುವಂತೆ ಮನವಿ ಮಾಡಿದ್ದರು. ಆದಾಗ್ಯೂ ಕಿವಿಗೊಡದ ನೂರಾರು ಜನರು ಮನೆಯಲ್ಲಿರುವ ಬದಲು ಬೆಳಗಿನ ವಾಕಿಂಗ್ ಗೆ ಮುಂದಾಗಿದ್ದರು. ಪ್ರತಿದಿನವೂ ಅಂತಹವರಿಗೆ ಪೊಲೀಸರು ಬುದ್ಧಿವಾದ ಹೇಳುತ್ತಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ.ಶನಿವಾರ ಕೆಲವು ಪ್ರದೇಶಗಳಿಂದ ವಾಯುವಿಹಾರಿಗಳನ್ನು ಕರೆದೊಯ್ದು ಅವರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ. ಆರೋಗ್ಯವಾಗಿರಲು ಪ್ರತಿದಿನ ಬೆಳಗಿನ ನಡಿಗೆ ಅಗತ್ಯ ಎಂಬುದೇನೋ ಸರಿ, ಆದರೆ ಕೊರೊನಾ ಸೋಂಕು ಹರಡದಂತ ತಡೆಗಟ್ಟಲು ಜನರು ಮನೆ ಮನೆಯಲ್ಲೇ ಇರುವಂತೆ ಪರಿಪರಿಯಾಗಿ ಮನವಿ ಮಾಡುತ್ತಿದ್ದರೂ ಅದು ಪ್ರಯೋಜನಕ್ಕೆ ಬರದಂತಾಗಿದೆ. ಆರೋಗ್ಯಕ್ಕಾಗಿ ನಡಿಗೆಗೆ ಹೊರಗೆ ಬಂದು ಬೀದಿಯಲ್ಲಿರುವ ಮಾರಿಯನ್ನು ಮನೆಗೆ ಕರೆದುಕೊಂಡು ಹೋಗಬೇಡಿ ಎಂದು ಪೊಲೀಸರು ಮತ್ತೆ ಮತ್ತೆ ಮನವಿ ಮಾಡಿದರು.