ಪ್ಲಾಸ್ಮಾ ಥೆರಪಿ: ರಾಜ್ಯಕ್ಕಿಂದು ಐತಿಹಾಸಿಕ ಕ್ಷಣ: ಡಾ.ಕೆ.ಸುಧಾಕರ್

ಬೆಂಗಳೂರು,  ಏ.25, ರಾಜ್ಯದಲ್ಲಿ ಇಂದಿನಿಂದ ಕೊರೊನಾ ಸೋಂಕಿತ ರೋಗಿಗೆ ಪ್ಲಾಸ್ಮಾ ಥೆರಪಿ  ಚಿಕಿತ್ಸೆ ಆರಂಭಿಸಲಾಗಿದ್ದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ  ಬಿ.ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ‌‌ ಸುಧಾಕರ್ ಅವರು ಪ್ಲಾಸ್ಮಾ  ಥೆರಪಿಗೆ ಅಧಿಕೃತವಾಗಿ ಚಾಲನೆ ನೀಡಿದರು.ನಂತರ  ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ‌.ಸುಧಾಕರ್ ಪ್ರತಿಕ್ರಿಯಿಸಿ, ರಾಜ್ಯದಲ್ಲಿ  ಪ್ಲಾಸ್ಮಾ ಥೆರಪಿ ಆರಂಭವಾಗಿದ್ದು, ಇದೊಂದು ಐತಿಹಾಸಿಕ ಕ್ಷಣವಾಗಿದೆ‌‌ ಎಂದು ಅಭಿಪ್ರಾಯ  ವ್ಯಕ್ತಪಡಿಸಿದರು.
ಕೋವಿಡ್-19 ಪೀಡಿತರಿಗೆ, ಕ್ಲಿಷ್ಟಕರ ಸ್ಥಿತಿಯಲ್ಲಿದ್ದವರಿಗೆ ಪ್ಲಾಸ್ಮಾ ಥೆರಪಿ ಅತ್ಯಂತ ಉಪಯುಕ್ತಕಾರಿ ಎಂಬುವುದು ನಮ್ಮೆಲ್ಲರ ಭಾವನೆ ಎಂದರು.ಶನಿವಾರದಂದು  ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ತಾವು ಥೆರಪಿಗೆ ಚಾಲನೆ ನೀಡಿದ್ದೇವೆ ಎಂದ ಅವರು,  ಸೋಂಕಿನಿಂದ ಗುಣಮುಖಗೊಂಡ ವ್ಯಕ್ತಿಯೋರ್ವರು ಸ್ವಯಂ ಪ್ರೇರಣೆಯಿಂದ ಪ್ಲಾಸ್ಮಾ ಥೆರಪಿಗೆ  ಒಳಪಡಲು ಒಪ್ಪಿಕೊಂಡಿದ್ದಾರೆ ಎಂದರು.ಕೆಲ  ರಾಜ್ಯಗಳಲ್ಲಿ ಆಗದ ಕೆಲಸ ನಮ್ಮ ರಾಜ್ಯದಲ್ಲಿ ಆಗುತ್ತಿದೆ‌. ಕೊರೊನಾ ರೋಗದಿಂದ  ಗುಣಮುಖರಾಗಿದ್ದವರಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಹೀಗಾಗಿ ಅವರಲ್ಲಿ  ಪ್ಲಾಸ್ಮಾ ಪಡೆಯಲಾಗುತ್ತದೆ ಎಂದರು.
ಅವರಿಂದ ಪ್ಲಾಸ್ಮಾ ಪಡೆದು ಸೋಂಕಿತರಿಗೆ ನೀಡುವುದರಿಂದ ಅವರು ಬೇಗನೇ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.ಇನ್ನೂ, ಆರೋಗ್ಯ ಸಚಿವ ಶ್ರೀರಾಮುಲು ಅವರು, #COVID19 ಸೋಂಕಿತ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಕಾನ್ವಾಲ್ ಸೆಂಟ್ ಪ್ಲಾಸ್ಮಾ ಥೆರಫಿ ಚಿಕಿತ್ಸೆ ನೀಡುವ ಕಾರ್ಯಕ್ಕೆ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು. ಈ  ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಹಾಗೂ ಬೆಂಗಳೂರು  ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ. ಸಿ ಆರ್  ಜಯಂತಿಯವರು ಉಪಸ್ಥಿತರಿದ್ದರು ಎಂದು ಫೋಟೋಗಳನ್ನು ಅಪ್ ಲೋಡ್ ಮಾಡುವ ಟ್ವೀಟ್  ಮಾಡಿದ್ದಾರೆ.