ಬೆಂಗಳೂರು, ಏ 29,ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಕರೆತರಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ರಾಜ್ಯ ಸರ್ಕಾರ ಈ ಸಂಬಂಧ ಕ್ರಿಯಾಯೋಜನೆ ರೂಪಿಸುತ್ತಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.ಕೋವಿಡ್-19 ನ ರಾಜ್ಯದ ಸ್ಥಿತಿಗತಿಗಳ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ 10,823 ಕನ್ನಡಿಗರು ವಿದೇಶದಲ್ಲಿ ಸಿಲುಕಿದ್ದಾರೆ. ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲಾಗುವುದು ಎಂದು ತಿಳಿಸಿದರು. ವಿದೇಶಗಳಲ್ಲಿ 4408 ಕನ್ನಡಿಗ ಪ್ರವಾಸಿಗರು, 3074 ವಿದ್ಯಾರ್ಥಿಗಳು, 2784 ವಲಸಿಗರು ಮತ್ತು ವೃತ್ತಿಪರರು ಮತ್ತು 557 ಹಡಗಿನ ಸಿಬ್ಬಂದಿ ಸಿಲುಕಿದ್ದಾರೆ. ಇವರಲ್ಲಿ 6100 ಜನರನ್ನು ಮೊದಲ ತಂಡವಾಗಿ ಕರೆತರಲಾಗುವುದು ಎಂದು ಮಾಹಿತಿ ನೀಡಿದರು. ಸದ್ಯ ಕೆನಡಾದಲ್ಲಿ 328, ಅಮೆರಿಕಾದಲ್ಲಿ 927 ಸೇರಿದಂತೆ ಇತರ ದೇಶಗಳಲ್ಲಿ ಅನೇಕರು ಸಿಲುಕಿದ್ದಾರೆ. ಇವರನ್ನು ಕರೆತಂದ ನಂತರ ಎ,ಬಿ.ಸಿ ಎಂಬ ವರ್ಗಗಳನ್ನು ಮಾಡಿ, ಅವರ ತಪಾಸಣೆ, ಕ್ವಾರಂಟೈನ್ ಹಾಗೂ ಚಿಕಿತ್ಸೆಗಳಿಗೆ ಸಿದ್ಧತೆ ಆರಂಭಿಸಲಾಗಿದೆ ಎಂದರು.