ಸಿಯೋಲ್ 29: ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ 181 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ರನ್‌ವೇಯಿಂದ ಪಲ್ಟಿಯಾದ ನಂತರ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದ ಕನಿಷ್ಠ 151 ಜನರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ದೃಢಪಡಿಸಿದೆ.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ಬಂದಿದ್ದ ವಿಮಾನವು, ನಿಲ್ದಾಣದಲ್ಲಿ ಇಳಿಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆವೊಂದು ವರದಿ ಮಾಡಿದೆ.
ಅಪಘಾತಕ್ಕೀಡಾದ ವಿಮಾನ 'ಜೆಜು ಏರ್' ವಿಮಾನಯಾನ ಸಂಸ್ಥೆಯದ್ದು. ಅದರಲ್ಲಿ 6 ಸಿಬ್ಬಂದಿ, 175 ಮಂದಿ ಪ್ರಯಾಣಿಕರಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಬದುಕುಳಿದಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ವಿಮಾನವು ಗೋಡೆಗೆ ಡಿಕ್ಕಿಯಾಗುತ್ತಿದ್ದಂತೆ, ಬೆಂಕಿ ಹೊತ್ತಿಕೊಳ್ಳುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ.
ಹಂಗಾಮಿ ಅಧ್ಯಕ್ಷ ಚೋಯ್ ಸಾಂಗ್-ಮೋಕ್ ಅವರು, ಪ್ರಯಾಣಿಕರ ರಕ್ಷಣೆಗೆ ಎಲ್ಲ ರೀತಿಯ ಪ್ರಯತ್ನ ಮಾಡುವಂತೆ ಆದೇಶಿಸಿದ್ದಾರೆ.
ವರದಿಗಳನ್ನು ಪರಿಶೀಲಿಸುತ್ತಿರುವುದಾಗಿ ಎಂದು 'ಜೆಜು ಏರ್' ವಕ್ತಾರರು ತಿಳಿಸಿದ್ದಾರೆ.