ಬೆಂಗಳೂರು, ಏ.30, ಈಗಾಗಲೇ ಬರಪೀಡಿತ ಪ್ರದೇಶವೆಂದು ಘೋಷಿಸಲ್ಪಟ್ಟ ಪ್ರದೇಶಗಳಲ್ಲಿ ಇನ್ನೂ ಮಳೆ ಬಾರದ ಹಿನ್ನೆಲೆಯಲ್ಲಿ ರಾಜ್ಯದ 18 ಜಿಲ್ಲೆಗಳಲ್ಲಿರುವ 49 ತಾಲೂಕುಗಳನ್ನು ಇನ್ನೂ ಒಂದು ತಿಂಗಳ ಕಾಲ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಮಳೆ ಪ್ರಾರಂಭವಾಗಿಲ್ಲ. ಅಲ್ಲಿ ಬರದ ಛಾಯೆ ಮುಂದುವರಿದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನೀರಿನ ಸಮಸ್ಯೆ ಮುಂದುವರಿದಿದೆ. ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ಪ್ರದೇಶ ಎಂದು ಘೋಷಿಸಲಾಗಿತ್ತು. ಅಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಮತ್ತೆ ಒಂದು ತಿಂಗಳ ಕಾಲ ಈ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇದರಿಂದ ಅಲ್ಲಿ ಇನ್ನೂ ಒಂದು ತಿಂಗಳು ಕುಡಿಯುವ ನೀರು, ಬರ ಕಾಮಗಾರಿ ಮುಂದುವರಿಯಲಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಇಂದು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರನಲ್ಲಿ ಮಳೆ ಬಂದು ಹನಿಯಾಗಿದ್ದು, ಹಲವು ರಸ್ತೆಗಳಲ್ಲಿ ನೀರು ನಿಂತಿವೆ. ಮಳೆ ಅನಾಹುತವನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಸಂಜೆ ಬಿಬಿಎಂಪಿ ಕಚೇರಿಯಲ್ಲಿ ಮೇಯರ್, ಆಯುಕ್ತರು, ಸಂಸದರು, ಅಧಿಕಾರಿಗಳ ಸಭೆ ಕರೆಯಲಾಗಿದೆ, ಮುಂದೆ ಮಳೆ ಬಂದಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಟಾಸ್ಕ್ ಪೋರ್ಸ್ ರಚನೆ, ನೋಡಲ್ ಅಧಿಕಾರಿಗಳ ನೇಮಕ ಮತ್ತು ಹಣಕಾಸು ಬಿಡುಗಡೆ ಮಾಡುವ ಸಂಬಂಧ ಚರ್ಚಿಸಲಾಗುವುದು ಎಂದು ಹೇಳಿದರು.
ಉಪ ನೋಂದಣಿ ಕಚೇರಿಗಳನ್ನು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತೆರೆಯಲಾಗಿದೆ. ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು. ರೆಡ್ ಝೋನ್‌ಗಳಿಗೆ ಇದು ಅನ್ವಯವಾಗುವು ದಿಲ್ಲ. ಪ್ರತಿ ಅರ್ಧ ಗಂಟೆಗೆ ಒಬ್ಬ ಸಾರ್ವಜನಿಕರಿಗೆ ಕಚೇರಿಗೆ ಬಂದು ಕೆಲಸ ಕಾರ್ಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಸಬ್ ರಿಜಿಸ್ಟರ್ ಆಫೀಸ್ ಗೆ ಕರೆ ಮಾಡಿ ನಾವು ಬರುತ್ತಿದ್ದೇವೆ ಎಂದು ಹೇಳಿದರೆ ಪೊಲೀಸ್ ವಾಟ್ಸ್ ಆಪ್ ನಲ್ಲಿ ಪಾಸ್ ಅನ್ನು ಅವರೇ ಕಳುಹಿಸಿಕೊಡುತ್ತಾರೆ. ಅದನ್ನು ತೆಗೆದುಕೊಂಡು ರಿಜಿಸ್ಟರ್ ಆಫೀಸ್ ಗೆ ಹೋಗಬಹುದು. ಸಾರ್ವಜನಿಕರು ಕೊರೋನ ನಿಯಮಗಳನ್ನು ಮೀರುವಂತಿಲ್ಲ ಎಂದು ಸಚಿವರು ಹೇಳಿದರು.
ಸಿಮೆಂಟ್ ಮತ್ತು ಸ್ಟೀಲ್ ಗಳ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ. ಬೆಂಗಳೂರಿನ ಹೊರ ಭಾಗದಲ್ಲಿ ಕ್ರಶರ್, ಸಿಮೆಂಟ್ , ಸ್ಟೀಲ್ ಅಂಗಡಿಗಳನ್ನು ತೆರೆಯಬಹುದು. ಜಿಲ್ಲಾಧಿಕಾರಿ, ನಗರ ಜಿಲ್ಲೆ, ಗ್ರಾಮಾಂತರ ಜಿಲ್ಲೆಗಳಲ್ಲಿ ಕ್ರಷರ್, ಸಿಮೆಂಟ್ ಮತ್ತು ಸ್ಟೀಲ್ ಅನುಮತಿ ನೀಡಲಿದ್ದಾರೆ ಎಂದು ಅಶೋಕ ಹೇಳಿದರು.