ಮುಂಬೈ ಅ 9: ಪ್ರದಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಎನ್ ಸಿ ಪಿ ನಾಯಕ, ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಮತ್ತೆ ಗುಡುಗಿದ್ದಾರೆ.
ಪಾಕಿಸ್ತಾನದ ಪರವಾಗಿದ್ದರೆ, ನೀವು (ಕೇಂದ್ರ ಸರಕಾರ) ನನಗೆ ಪದ್ಮವಿಭೂಷಣ ಕೊಟ್ಟಿದ್ದು ಏಕೆ ? ಎಂದು ನೇರ ಪ್ರಶ್ನೆ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ಉತ್ತಮ ಆತಿಥ್ಯ ಸತ್ಕಾರ ದೊರಕಿದೆ. ಕೇಂದ್ರ ಸರಕಾರ ಹೇಳುವ ಹಾಗೆ ಅಲ್ಲಿ ಕೆಟ್ಟ ಪರಿಸ್ಥಿತಿ ಇಲ್ಲ ಎಂದು ಇತ್ತೀಚೆಗೆ ಶರದ್ ಪವಾರ್ ಹೇಳಿಕೆ ನೀಡಿದ್ದರು. ಕೆಲ ದಿನಗಳ ಹಿಂದೆ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಸಹ ವಿಷಯವನ್ನು ಮುಂದಿಟ್ಟುಕೊಂಡು ಪವಾರ್ ವಿರುದ್ಧ ವಾಗ್ದಾಳಿ ಮಾಡಿದ್ದರು. ಇದು ವಾದ- ವಿವಾದಕ್ಕೆ ಕಾರಣವಾಗಿತ್ತು. ಈಗ ಇದೇ ಚುನಾವಣಾ ವಿಷಯವಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಶರದ್ ಪವಾರ್, ಪ್ರಧಾನ ಮಂತ್ರಿಯವರಿಗೆ ಖಚಿತ ಮಾಹಿತಿ ಕೊಡುವವರು ಇದ್ದಾರೆ ಎಂದು ನಂಬಿದ್ದೆ. ಆದರೆ ನಾನು ಏನು ಹೇಳಿದ್ದೆ ಎಂದು ಅವರಿಗೆ ಖಚಿತವಾಗಿ ಯಾರೂ ಹೇಳಿಲ್ಲ ಎಂಬುದು ಗೊತ್ತಾಗುತ್ತಿದೆ ಎಂದು ತಿರುಗೇಟು ನೀಡಿ, ಪಾಕ್ ಪರವಾಗಿ ಇದ್ದರೆ, ಅವರು ಏಕೆ ನನಗೆ ಪದ್ಮ ಪ್ರಶಸ್ತಿ ನೀಡಿದ್ದು ಎಂದು ಪ್ರಶ್ನೆ ಮಾಡಿದ್ದಾರೆ.