ಬೆಂಗಳೂರು, ಏ.23, ಪಾದರಾಯನಪುರ ಘಟನೆಗೆ ಸಂಬಂಧಿಸಿ ಇನ್ನೂ 20 ಮಂದಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ತೆರಳಿದ್ದ ವೇಳೆ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ ಘಟನೆಯಲ್ಲಿ ಇನ್ನೂ20 ಮಂದಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು, ಅವರಿಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಪಾದರಾಯನಪುರ ಘಟನೆ ಸಂಬಂಧ ಈಗಾಗಲೇ 126 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ರಾಮನಗರ ಜೈಲಿಗೆ ಕಳುಹಿಸಲಾಗಿದೆ.
ಪಾದರಾಯನಪುರ ವಾರ್ಡ್ ಸಂಪೂರ್ಣ ಪೊಲೀಸ್ ಸರ್ಪಗಾವಲಿನಲ್ಲಿದ್ದು, ಗಲ್ಲಿ ಗಲ್ಲಿಗಳಲ್ಲಿಯೂ ಪೊಲೀಸರ ಬೂಟಿನ ಶಬ್ದವೇ ಕೇಳಿಬರುತ್ತಿರುವುದರಿಂದ ಸ್ಥಳೀಯರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಅಗತ್ಯ ವಸ್ತುಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಸ್ಥಳೀಯರು ಸಂಕಷ್ಟದಲ್ಲಿದ್ದಾರೆ. ಬಿಬಿಎಂಪಿ ಈ ಸಮಸ್ಯೆಯನ್ನು ಅರಿತು ಅಗತ್ಯ ವಸ್ತುಗಳನ್ನು ಪೂರೈಸಲು ನಿರ್ಧರಿಸಿದೆ. ಇಡೀ ಪ್ರದೇಶದಲ್ಲಿ ಪೊಲೀಸ್ ಪಡೆ ಮೂರು ಸುತ್ತು ಪಥ ಸಂಚಲನ ನಡೆಸಿದೆ.
ಡಿಸಿಪಿ, ಎಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆಗೂ ನಗರ ಪೊಲೀಸ್ ಆಯುಕ್ತರು ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಪಾದರಾಯನಪುರ ಸುತ್ತಮುತ್ತಲಿನ ಭದ್ರತೆಗೆ ಉತ್ತರ ಮತ್ತು ಪಶ್ಚಿಮ ಡಿಸಿಪಿ ವಿಭಾಗದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಕ್ಷಿಣ ಡಿಸಿಪಿ ವಿಭಾಗದ 15 ಠಾಣೆಗಳಿಂದ ತಲಾ ಒಬ್ಬ ಸಬ್ ಇನ್‌ಸ್ಪೆಕ್ಟರ್, ಒಬ್ಬ ಹೆಡ್ ಕಾನ್‌ಸ್ಟೆಬಲ್ ಮತ್ತು ಒಬ್ಬ ಕಾನ್‌ಸ್ಟೆಬಲ್ ಕರೆಸಿಕೊಳ್ಳಲಾಗಿದೆ.ಈ ನಡುವೆ ಲಾಕ್ ಡೌನ್ ಉಲ್ಲಂಘಿಸಿ ಪಾದರಾಯನಪುರ ಜಯನಗರ, ಚಾಮರಾಜಪೇಟೆಯಿಂದ ಗೌರಿಬಿದನೂರು ತಾಲೂಕಿನ ಮರಾಠಿಪಾಳ್ಯಕ್ಕೆ ಹೋಗಿದ್ದ ಐವರ ಮೇಲೆ ಪ್ರಕರಣ ದಾಖಲಾಗಿದೆ.
ಗಲಾಟೆ ಪ್ರಕರಣದ ನಂತರ ಕದ್ದುಮುಚ್ಚಿ ಪಾದರಾಯನಪುರ ಹಾಗೂ ಚಾಮರಾಜಪೇಟೆಯ ತಲಾ ಇಬ್ಬರು ಜಯನಗರದ ಓರ್ವ ಸೇರಿ ಐದು ಮಂದಿ ಆಟೋ ದಲ್ಲಿ ಮರಾಠಿಪಾಳ್ಯದ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಧಾವಿಸಿದ ಪೊಲೀಸರು 5 ಮಂದಿಯನ್ನ ವಶಕ್ಕೆ ಪಡೆದು ಕ್ವಾರಂಟೈನ್ ಮಾಡಿದ್ದಾರೆ. ಐವರ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗೌರಿಬಿದನೂರು ತಾಲೂಕು ಡಿ ಪಾಳ್ಯ ಗ್ರಾಮದ 4 ಮಂದಿ ಹಿಂದೂಪುರಕ್ಕೆ ಹೋಗಿ ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ವಾಪಾಸ್ಸಾಗಿದ್ದ ಮಾಹಿತಿ ತಿಳಿದ ಪೊಲೀಸರು ಆ ನಾಲ್ಕುಮಂದಿಯನ್ನ ಕ್ವಾರಂಟೈನ್ ಗೆ ಕಳುಹಿಸಿದ್ದಾರೆ. ನಾಲ್ವರ ಗಂಟಲ ದ್ರವದ ಪರೀಕ್ಷೆ ಮಾಡಿಸಿದ್ದು ನೆಗೆಟಿವ್ ಬಂದಿದೆ. ಲಾಕ್ ಡೌನ್ ಉಲ್ಲಂಘಿಸಿ ನೆರೆಯ ರಾಜ್ಯಕ್ಕೆ ಹೋಗಿ ಬಂದ ಹಿನ್ನೆಲೆಯಲ್ಲಿ 4 ಮಂದಿ ವಿರುದ್ಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.