ಬೆಂಗಳೂರು, ಏ.24, ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ತಂಬಾಕು ಹಾಗೂ ಗುಟ್ಕಾ ಉತ್ಪನ್ನಗಳ ಮಾರಾಟ ನಿಷೇಧ ಮಾಡಿದ್ದರೂ ಸಹ ದೇಶಿಯ ಹಾಗೂ ವಿದೇಶಿ ಸಿಗರೇಟ್‌ಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 3 ಲಕ್ಷ ರೂ. ಮೌಲ್ಯದ ಸಿಗರೇಟುಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳಾದ ರಿಚ್ಮಂಡ್ ಟೌನ್ ಆಗಾ ಅಬ್ದುಲ್ಲಾ ಸ್ಟ್ರೀಟ್ ನಿವಾಸಿ ಅಖ್ತರ್ ಮಿರ್ಜಾ (28), ಶಾಂತಿನಗರ ಬರ್ಲಿನ್ ಸ್ಟ್ರೀಟ್ ನಿವಾಸಿ ತಸ್‌ಬುದ್ದೀನ್ ಮೊಯಿದ್ದೀನ್ (32) ಬಂಧಿತ ಆರೋಪಿಗಳು.
ಆರೋಪಿಗಳ ವಿರುದ್ಧ ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ.ಕೋವಿಡ್-19 ಹಿನ್ನೆಲೆಯಲ್ಲಿ ಭಾರತದಾದ್ಯಂತ ತಂಬಾಕು ಉತ್ಪನ್ನಗಳಾದ ಸಿಗರೇಟ್ ಹಾಗೂ ಗುಟ್ಕಾ ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂದು ಸರ್ಕಾರ ಆದೇಶಿಸಿದೆ. ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡು, "ಮೂನ್ ಲೈಟ್ ಡೆಲಿವರಿಸ್" ಎಂಬ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ದೇಶೀಯ ಸಿಗರೇಟ್ ಮತ್ತು ವಿದೇಶಿ ಸಿಗರೇಟ್ ಹಾಗೂ ಇತರ ವಸ್ತುಗಳು ವಿವರಗಳು ಹಾಗೂ ಬೆಲೆಯನ್ನು ನಮೂದಿಸಿ ಆರ್ಡ್ ಮಾಡಿದ್ದಲ್ಲಿ ಡೆಲಿವರಿ ಮಾಡುವುದಾಗಿ ಆರ್ಡರ್ ಮಾಡಲು ಮೊಬೈಲ್ ಸಂಖ್ಯೆ 9663999361 ಅನ್ನು ನಮೂದಿಸಿ ಸೋಷಿಯಲ್ ಮೀಡಿಯಾದಲ್ಲಿ ಜಾಹೀರಾತು ನೀಡಿದ್ದರು.ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಏಪ್ರಿಲ್ 22ರಂದು ಸಂಜೆ 5.30ರ ಸುಮಾರಿಗೆ ಮೂನ್ ಲೈಟ್ ಡೆಲಿವರಿಸ್‌ನ ಆರೋಪಿಗಳು ಸಿಗರೇಟ್‌ಗಳನ್ನು ಡೆಲಿವರಿ ಮಾಡಲು ಕಸ್ತೂರಬಾ ರಸ್ತೆಯಲ್ಲಿರುವ ಗಣೇಶ ದೇವಸ್ಥಾನದ ಬಳಿ ಹೋಂಡಾ ಸಿಟಿ ಕಾರಿನಲ್ಲಿ ಡೆಲಿವರಿಗೆ ಬಂದಿದ್ದಾಗ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಸುಮಾರು 3 ಲಕ್ಷ ರೂ. ಮೌಲ್ಯದ ದೇಶಿಯ ಮತ್ತು ವಿದೇಶಿಯ ಸುಮಾರು 450 ಪ್ಯಾಕ್ ಸಿಗರೇಟ್‌ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿಯ ಇಒಡಬ್ಲ್ಯು ದಳದ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.