ಟೋಕಿಯೊ, ಆ 17 ಪೆನಾಲ್ಟಿ ಕಾರ್ನರ್ ವಿಶೇಷ ಆಟಗಾರ್ತಿ ಗುರುಜೀತ್ ಕೌರ್ ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ ಟೆಸ್ಟ್ನ ಮೊದಲನೇ ಪಂದ್ಯದಲ್ಲಿ ಜಪಾನ್ ವಿರುದ್ಧ 2-1 ಅಂತರದಲ್ಲಿ ಗೆದ್ದು ಶುಭಾರಂಭ ಮಾಡಿದೆ.
ಶನಿವಾರ ಇಲ್ಲಿನ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಆರಂಭದಲ್ಲೇ ಭಾರತ ಮುನ್ನಡೆ ಪಡೆಯಿತು. ಒಂಬತ್ತನೇ ನಿಮಿಷದಲ್ಲಿ ಗುರುಜೀತ್ ಕೌರ್ ಗಳಿಸಿದ ಮೊದಲ ಗೋಲಿನ ನೆರವಿನಿಂದ ಭಾರತ 1-0 ಮುನ್ನಡೆ ಸಾಧಿಸಿತು. ಕೇವಲ ಐದು ನಿಮಿಷಗಳ ಅಂತರದಲ್ಲಿ ಪುಟಿದೆದ್ದ ಆತಿಥೇಯ ಜಪಾನ್ ತಂಡಕ್ಕೆ 16ನೇ ನಿಮಿಷದಲ್ಲಿ ಅಕಿ ಮಿತ್ಸುಹಾಶಿ ಗೋಲಿನ ಖಾತೆ ತೆರೆದರು. ಆ ಮೂಲಕ ಉಭಯ ತಂಡಗಳು 1-1 ಸಮಬಲ ಸಾಧಿಸಿದವು.
ನಂತರ 35ನೇ ನಿಮಿಷದಲ್ಲಿ ಗುರುಜೀತ್ ಕೌರ್ ಅವರು ಮತ್ತೊಂದು ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ಗಳಿಸಲು ಪ್ರಯತ್ನಿಸಿ ಯಶಸ್ವಿಯಾದರು. ಆರಂಭದಿಂದಲೂ ಭಾರತ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಸಫಲವಾಯಿತು. ಹಾಗಾಗಿ, ಆರಂಭಿಕ 10 ನಿಮಿಷದಲ್ಲೇ ಗೋಲು ಗಳಿಸುವ ಹಲವು ಅವಕಾಶಗಳನ್ನು ಪಡೆದಿತ್ತು.
ಒಂಬತ್ತನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ನಲ್ಲಿ ಗುರುಜೀತ್ ಕೌರ್ ಅವರು ಎದುರಾಳಿ ಗೋಲ್ಕೀಪರ್ ಮೆಗುಮಿ ಕಗೆಯಾಮ ಅವರನ್ನು ವಂಚಿಸಿ ಗೋಲು ಗಳಿಸುವಲ್ಲಿ ಸಫಲವಾದರು. ಒಲಿಂಪಿಕ್ಸ್ ಕ್ರೀಡಾಕೂಟದ ಮಾರ್ಗದರ್ಶನದಂತೆ ಒಂದು ತಂಡ 16 ಆಟಗಾರ್ತಿಯರನ್ನು ಆಡಿಸಬಹುದಾಗಿದೆ. ಇದು ಎದುರಾಳಿ ತಂಡಕ್ಕೆ ಫಲ ನೀಡಿತು. 16ನೇ ನಿಮಿಷದಲ್ಲಿ ಹೆಚ್ಚುವರಿ ಆಟಗಾರ್ತಿಯಾಗಿ ಅಂಗಳಕ್ಕೆ ಆಗಮಿಸಿದ್ದ ಅಕಿ ಮಿತ್ಸುಹಾಶಿ ಅವರು ಅದ್ಭುತವಾಗಿ ಗೋಲು ಗಳಿಸಿ ಜಪಾನ್ಗೆ ಸಮಬಲ ಸಾಧಿಸಲು ನೆರವಾದರು.
ಉಭಯ ತಂಡಗಳಿಂದ ಆರಂಭದಿಂದಲೂ ಭಾರಿ ಕಾದಾಟ ನಡೆದಿತ್ತು. ಅಂಗಳದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಎರಡೂ ತಂಡಗಳು ಪ್ರದರ್ಶನ ತೋರಿದವು. ಅಂತಿಮವಾಗಿ ಮೊದಲಾರ್ಧದ ಮುಕ್ತಾಯಕ್ಕೆ ಭಾರತ ಮತ್ತು ಜಪಾನ್ 1-1 ಸಮಬಲದೊಂದಿಗೆ ವಿಶ್ರಾಂತಿಗೆ ತೆರಳಿದವು.
ಮೂರನೇ ಕ್ವಾರ್ಟರ್ಗೆ ಕಣಕ್ಕೆ ಇಳಿದ ಭಾರತ ಕೆಲವೇ ನಿಮಿಷಗಳಲ್ಲಿ ಮುನ್ನಡೆ ಸಾಧಿಸಿತು. 35ನೇ ನಿಮಿಷದಲ್ಲಿ ಮ್ಯಾಜಿಕ್ ಮಾಡಿದ ಗುರುಜೀತ್ ಕೌರ್ ಭಾರತಕ್ಕೆ ಮತ್ತೊಂದು ಗೋಲು ಕೊಡುಗೆಯಾಗಿ ನೀಡಿದರು. ಆ ಮೂಲಕ ಭಾರತ 2-1 ಮುನ್ನಡೆ ಸಾಧಿಸಿತು.
ಆತಿಥೇಯರು ಮತ್ತೊಂದು ಗೋಲು ಗಳಿಸಿ ಸಮಬಲ ಸಾಧಿಸಲು ಸಾಕಷ್ಟು ಹೋರಾಟ ನಡೆಸಿತು. ಆದರೆ, ಸಿಕ್ಕಿದ್ದ ಹಲವು ಅವಕಾಶಗಳನ್ನು ಕೈಚೆಲ್ಲಿಕೊಂಡಿತು. ಅಂತಿಮವಾಗಿ ಭಾರತ 2-1 ಅಂತರದಲ್ಲಿ ವಿಜಯ ಪತಾಕೆ ಹಾರಿಸಿತು.
ರಾಣಿ ರಾಂಪಾಲ್ ಬಳಗ ನಾಳೆ ಬಲಿಷ್ಟ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಉಭಯ ತಂಡಗಳ ಕಳೆದ 10 ಬಾರಿ ಮುಖಾಮುಖಿಯಾಗಿದ್ದು, ಭಾರತ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ. ಹಾಗಾಗಿ, ನಾಳಿನ ಪಂದ್ಯ ಭಾರತ ವನಿತೆಯರಿಗೆ ಕಠಿಣವಾಗಲಿದೆ.