ಚೆಸ್ ಚಾಂಪಿಯನ್‌ಷಿಪ್‌ನಿಂದ ಐದು ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲಸನ್ ಅನರ್ಹ

Five-time world champion Magnus Carlsen has been disqualified from the Chess Championship

ನ್ಯೂಯಾರ್ಕ್ 28: ಅಂತರರಾಷ್ಟ್ರೀಯ ಚೆಸ್‌ ಫೆಡರೇಷನ್‌ನ (ಫಿಡೆ) ವಸ್ತ್ರ ಸಂಹಿತೆ ನಿಯಮ ಉಲ್ಲಂಘನೆಯ ಆರೋಪದಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಅವರು ವಿಶ್ವ ರ್‍ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಷಿಪ್‌ನಿಂದ ಅನರ್ಹಗೊಂಡಿದ್ದಾರೆ.

ಜೀನ್ಸ್ ಪ್ಯಾಂಟ್ ಧರಿಸಿದ್ದ ವಿಶ್ವದ ಅಗ್ರಮಾನ್ಯ ಚೆಸ್ ಆಟಗಾರ ಕಾರ್ಲಸನ್ ಅವರಿಗೆ ಮೊದಲು 200 ಅಮೆರಿಕನ್ ಡಾಲರ್ ದಂಡ ವಿಧಿಸಲಾಯಿತು. ಬಳಿಕ ಪಂದ್ಯಾವಳಿಯ ನಿಯಮಾವಳಿಗೆ ಅನುಗುಣವಾಗಿ ಅನರ್ಹಗೊಳಿಸಲಾಯಿತು.

ವಾಲ್ ಸ್ಟ್ರೀಟ್‌ನಲ್ಲಿ ನಡೆಯುತ್ತಿರುವ ರ್‍ಯಾಪಿಡ್ ಚಾಂಪಿಯನ್‌ಷಿಪ್‌ನ 9ನೇ ಸುತ್ತಿನ ಪಂದ್ಯದಲ್ಲಿ ಕಾರ್ಲಸನ್‌ಗೆ ಅವಕಾಶ ನಿರಾಕರಿಸಲಾಯಿತು.

ಉಡುಪು ಬದಲಿಸುವಂತೆ ಕಾರ್ಲಸನ್‌ಗೆ ವಿನಂತಿಸಿದರೂ ಅವರು ಅದನ್ನು ಪಾಲಿಸಲಿಲ್ಲ, ವಸ್ತ್ರ ಸಂಹಿತೆ ನಿಯಮ ನಾಳೆಯಿಂದ ಪಾಲಿಸುವುದಾಗಿ ತಿಳಿಸಿದರ  ಅವರು ತಕ್ಷಣವೇ ಜೀನ್ಸ್ ಬದಲಿಸಲು ತಯಾರಿರಲಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಕುರಿತು ಸ್ಪಷನೆ ನೀಡಿರುವ ಚೆಸ್‌ ಫೆಡರೇಷನ್‌, ವಸ್ತ್ರ ಸಂಹಿತೆ ಬಗ್ಗೆ ಸ್ಪರ್ಧಾಳುಗಳಿಗೆ ಮೊದಲೇ ತಿಳಿಸಲಾಗುತ್ತದೆ. ಆಟದಲ್ಲಿ ವೃತ್ತಿಪರತೆ ಖಚಿತಪಡಿಸಲು ಇದು ಅವಶ್ಯಕವಾಗಿದೆ ಎಂದು ಹೇಳಿದೆ.