ಕರ್ತವ್ಯಲೋಪವೆಸಗುವ ಅಂಗನವಾಡಿ ಕಾರ್ಯಕರ್ತೆಯರ ವಿರುದ್ದ ಕ್ರಮ ಕೈಗೊಳ್ಳಲು ಸೂಚನೆ

ಲೋಕದರ್ಶನ ವರದಿ

ವಿಜಯಪುರ 01: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕರ್ತವ್ಯಲೋಪವೆಸಗುತ್ತಿದ್ದಾರೆ. ಅಂತಹವರ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು 13ನೇ ಮುಂದುವರೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಕೆಲವು ಅಂಗನವಾಡಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಮಕ್ಕಳಿಗೆ ಸರಿಯಾಗಿ ಆಹಾರ ಒದಗಿಸುತ್ತಿಲ್ಲ. ಮಾತೃಪೂರ್ಣ, ಮಾತೃವಂದನ ಯೋಜನೆಯಡಿ ಗರ್ಭಿಣಿ  ಹಾಗೂ ಬಾಣಂತಿಯರಿಗೆ ನಿಗದಿತ ಆಹಾರ ಒದಗಿಸುತ್ತಿಲ್ಲ ಎಂಬ ಜಿಲ್ಲಾ ಪಂಚಾಯತ್ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ತವ್ಯದಲ್ಲಿ ಲೋಪವೆಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 2014-15ರಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ವಿಷಯವಾಗಿ ಚಚರ್ಿಸಿ ರೈತರಿಗೆ ಪರಿಹಾರ ವಿತರಿಸದೆ ಅವ್ಯವಹಾರ ಬೆಳಕಿಗೆ ಬಂದಿದ್ದು, ಇದರಲ್ಲಿ ಲಕ್ಷಾಂತರ ಹಣ ರೈತರಿಗೆ ಸಿಗದೆ ಇನ್ನಾರೋ ಪಾಲಾಗಿದೆ ಈ ಕುರಿತು ಸೂಕ್ತ ಕ್ರಮ ಜರುಗಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ಈ ಕುರಿತಂತೆ ಸಮಗ್ರವಾಗಿ ಪರಿಶೀಲನೆ ನಡೆಸಿ 15 ದಿನಗೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸೂಚನೆ ನೀಡಿದರು. 

ಉಪಾದ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿ ಜಿಲ್ಲೆಯಲ್ಲಿ ಒಟ್ಟು ಎಷ್ಟು ಸಹಕಾರ ಸಂಘಗಳಿವೆ ಅದರಲ್ಲಿ ಸಕರ್ಾರದ ಅನುದಾನ ಪಡೆಯುತ್ತಿರುವ ಸಂಘಗಳೆಷ್ಟು, ಅನುದಾನ ಪಡೆಯದೆ ಇರುವ ಸಂಘಗಳೆಷ್ಟು ವಿವರ ನೀಡಬೇಕು. ಬಿದರಕುಂದಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಬಹಳಷ್ಟಿದೆ. ಅಲ್ಲಿಯ ಜನರು ಒಂದೊಂದು ದಿನ ಕಳೆಯುವುದು ಕಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಶೀಘ್ರ ಅಗತ್ಯ ಕ್ರಮ ಕೈಗೊಂಡು ಕುಡಿಯುವ  ನೀರಿನ ಸಮಸ್ಯೆ ಪರಿಹಾರ ಒದಗಿಸಬೇಕು ಎಂದು ಸೂಚನೆ ನೀಡಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಕೊಡಬಾಗಿ ಸೇರಿದಂತೆ ವಿವಿಧ ಜಿ.ಪಂ.ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.