ಚಾಮರಾಜನಗರ, ಏಪ್ರಿಲ್ 30,ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಹೂಡದೇ ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಚೆಕ್‍ಪೋಸ್ಟ್ ಮೂಲಕ ಪ್ರತಿದಿನ ಮೈಸೂರಿಗೆ ಸಂಚರಿಸುತ್ತಿರುವ 14 ಅಧಿಕಾರಿ ನೌಕರರಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ನಗರದ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಭಾರತಿ, ಯಳಂದೂರು ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿ ಸೋಮಶೇಖರ್, ಪ್ರಥಮ ದರ್ಜೆ ಸಹಾಯಕ ಎಂ.ಆರ್. ರವೀಂದ್ರ, ಚಾಮರಾಜನಗರದ ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್ ಚಿದಾನಂದ್, ಗುಂಡ್ಲುಪೇಟೆ ತಾಲೂಕಿನ ಖಜಾನೆಯ ಸಹಾಯಕ ನಿರ್ದೇಶಕರಾದ ನಾಗರತ್ನ, ನಗರದ ಜಿಲ್ಲಾ ಶಿಕ್ಷಣ ತರಬೇತಿ ಕೆಂದ್ರದ ಸಹಾಯಕ ಸಾಂಖ್ಯಿಕ ಅಧಿಕಾರಿ ವೆಂಕಟರಾವ್, ಕೆ.ಆರ್.ಐ.ಡಿ.ಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಹದೇವಸ್ವಾಮಿ, ನಗರದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಎನ್.ಎಸ್. ಪಣೀಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ಮೇಲ್ವಿಚಾರಕರಾದ ಅಶ್ವಥ್ ನಾರಾಯಣ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗುಮಾಸ್ತರಾದ ರಾಜಣ್ಣ, ಸಹಾಯಕರಾದ ಶ್ರೀನಿವಾಸ್, ಪಿ.ಎಲ್.ಡಿ. ಬ್ಯಾಂಕ್ ಗುಮಾಸ್ತರಾದ ಶಶಿ, ಚಾಮರಾಜನಗರ ತಾಲೂಕು ಕುದೇರಿನ ಎಸ್,ಬಿ.ಐ ಶಾಖೆಯ ಅಸೋಷಿಯೆಟ್ ಮಂಜುನಾಥ್, ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಅಲ್ಲದೆ, ಚಾಮರಾಜನಗರ ತಾಲೂಕು ಉಪನೊಂದಣಾಧಿಕಾರಿ ರಾಧಾ, ಕೊಳ್ಳೇಗಾಲ ತಾಲೂಕು ಉಪನೊಂದಣಾಧಿಕಾರಿ ಪಿ.ಆರ್. ರೇಖಾ, ಹನೂರು ತಾಲೂಕು ಉಪನೊಂದಣಾಧಿಕಾರಿ ನಂದೀಶ್, ಕೊಳ್ಳೇಗಾಲ ಉಪನೊಂದಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾದ ಗೀತಾ ಅವರು ಪ್ರತಿದಿನ ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಹೂಡದೇ ಸ್ವಂತ ಊರಿಗೆ ಪ್ರತಿದಿನ ತೆರಳಲು ಅನುಮತಿ ನೀಡಿರುವ ಜಿಲ್ಲಾ ನೊಂದಣಾಧಿಕಾರಿ ಹಂಸವೇಣಿ ಅವರಿಗೂ ಜಿಲ್ಲಾಧಿಕಾರಿಯವರು ನೋಟಿಸ್ ಜಾರಿ ಮಾಡಿದ್ದಾರೆ.
ಕೋವಿಡ್-19ರ ಮುಂಜಾಗ್ರತಾ ಕ್ರಮಗಳ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೇಂದ್ರಸ್ಥಾನದಲ್ಲಿಯೇ ವಾಸ್ತವ್ಯ ಹೂಡಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಆದರೂ ಇಂತಹ ತುರ್ತು ಸಂದರ್ಭದಲ್ಲಿ ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಹೂಡದೇ ಬಾಣಹಳ್ಳಿ ಚೆಕ್‍ಪೋಸ್ಟ್ ಮೂಲಕ ಚಾಮರಾಜನಗರ ಮೈಸೂರು ನಡುವೆ ಸಂಚರಿಸುತ್ತಿರುವುದು ಕಂಡುಬಂದಿದೆ. ಆದೇಶ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕಾರಣ ಕೇಳಿ ಸಂಬಂಧಪಟ್ಟ 14 ಅಧಿಕಾರಿ, ನೌಕರರಿಗೆ ನೋಟಿಸ್ ಜಾರಿ ಮಾಡಿರುವ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ನೋಟಿಸ್ ತಲುಪಿದ 24 ಗಂಟೆಯೊಳಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಇಲ್ಲವಾದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ.