ಬೆಳಗಾವಿ 05: ಭಾರತೀಯ ಕೃಷಿಕ ಸಮಾಜ ಹಾಗೂ ವಿವಿಧ ರೈತ ಸಂಘಟನೆಗಳ ಹೋರಾಟದ ಪ್ರತಿಫಲವಾಗಿ ರಾಜ್ಯ ಕೃಷಿ ಮಾರಾಟ ನಿರ್ದೇಶಕರ ಕಚೇರಿ ಕಾನೂನು ಬಾಹಿರವಾಗಿ ನಗರದಲ್ಲಿ ನಡೆಸುತ್ತಿರುವ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಯವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ಜಾರಿಯಾದ ಏಳು ದಿನಗಳ ಒಳಗಾಗಿ ಸೂಕ್ತ ದಾಖಲೆ ಸಲ್ಲಿಸುವಂತೆ ತಿಳಿಸಿದೆ ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯ ಅಧ್ಯಕ್ಷ ಸಿದಗೌಡ ಮೋದಗಿ ಅವರು ಹೇಳಿದರು.
ಬುಧವಾರ ನಗರದಲ್ಲಿ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನೋಟಿಸ್ ಜಾರಿಯಾದಾಗಿನಿಂದ ಖಾಸಗಿ ಮಾರುಕಟ್ಟೆ ಉಳಿಸಿಕೊಳ್ಳಲು ತೆರೆಮರೆಯಲ್ಲಿ ರಾಜಕೀಯ ಪ್ರೇರಿತ ಪ್ರಯತ್ನಗಳು ನಡೆಯುತ್ತಿದೆ. ಆದರೆ, ಕೃಷಿ ಮಾರಾಟ ಇಲಾಖೆ ಇದಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು. ಖಾಸಗಿ ತರಕಾರಿ ಮಾರುಕಟ್ಟೆ ಸರಕಾರದ ಯಾವುದೇ ಕಾನೂನು ಪಾಲನೆ ಮಾಡಿರುವುದಿಲ್ಲ. ಕೃಷಿ ಮಾರಾಟ ಇಲಾಖೆಗೆ ಸಲ್ಲಿಸಬೇಕಾದ ದಾಖಲೆಗಳು ಅವರ ಬಳಿ ಇಲ್ಲ. ಹೀಗಾಗಿ ಖಾಸಗಿ ಮಾರುಕಟ್ಟೆ ಮುಚ್ಚುವ ಎಲ್ಲಾ ಸಾಧ್ಯತೆ ಇದೆ.
ಹೀಗಾಗಿ ಖಾಸಗಿ ಮಾರುಕಟ್ಟೆಗಳು ಸರಕಾರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರವಾಗುವುದು ಸೂಕ್ತ ಎಂದರು. ರೈತರ ಮುಂದೆ ದರ ನಿಗದಿ, ತೂಕ ಹಾಗೂ ಪಾರದರ್ಶಕ ವಹಿವಾಟ ನಡೆಸುವ ಸಲುವಾಗಿ ಸರಕಾರದ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿಯೇ ವ್ಯಾಪರ ಬಹಿವಾಟ ಪ್ರಾರಂಭಿಸಬೇಕು. ಹೀಗಾಗಿ ಖಾಸಗಿ ಮಾರುಕಟ್ಟೆಯವರು ಸರಕಾರದ ಅಭಿಪ್ರಾಯಗಳಿಗೆ ಮನ್ನಣೆ ಕೊಟ್ಟು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪರಸ್ಪರ ಸಹಕಾರದಿಂದ ವಹಿವಾಟ ಮಾಡಬೇಕು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ರಾಜಶೇಖರ ಗಣಾಚಾರಿ ಉಪಸ್ಥಿತರಿದ್ದರು.