ಬೆಳಗಾವಿ / ಸಂಕೇಶ್ವರ : ರಾಜಕೀಯ ಬೆಳವಣಿಗೆ ಯೊಂದರಲ್ಲಿ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಉಮೇಶ್ ಕತ್ತಿ ಅವರು ಶುಕ್ರವಾರ ಸಂಜೆ ರಾಜೀನಾಮೆ ನೀಡಿದ್ದಾರೆ.
ಶುಕ್ರವಾರ ಸಂಜೆ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಸಭಾಗೃಹದಲ್ಲಿ ಕಾರಖಾನೆ ಆಡಳಿತ ಮಂಡಳಿಯ ಸಭೆ ನಡೆಯಿತು. ಈ ಸಭೆಯಲ್ಲಿ ತಾವು ಕಾರಖಾನೆಯ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ನಿಖಿಲ್ ಕತ್ತಿ ಪ್ರಕಟಿಸಿದರು.
ಬಳಿಕ ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ಸಾತಾಪ್ಪ ಕರ್ಕಿನಾಯಿಕ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದಿದೆ.
ಕಳೆದ ಸೆಪ್ಟೆಂಬರ್ ತಿಂಗಳ 23ರಂದು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಕಾರಖಾನೆಯನ್ನು ಲೀಜ್ ಆಧಾರದಲ್ಲಿ ಖಾಸಗಿಯವರಿಗೆ ನಡೆಸಲು ಕೊಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈ ನಿರ್ಣಯಕ್ಕೆ ಹೆಚ್ವಿನ ಸಂಖ್ಯೆಯ ಆಡಳಿತ ಮಂಡಳಿ ಸದಸ್ಯರಿಂದ ವಿರೋಧ ವ್ಯಕ್ತವಾಗಿತ್ತು.
ಅಂದಿನಿಂದ ಇಲ್ಲಿಯ ವರೆಗೆ ಕಾರಖಾನೆಯನ್ನು ಲೀಜ್ ಕೊಡುವ ಬಗ್ಗೆ ಸಾರ್ವಜನಿಕವಾಗಿ ಹಲವಾರು ಚರ್ಚೆಗಳು ನಡೆದಿದ್ದವು. ಆದರೆ ಇವತ್ತು ನಿಖಿಲ್ ಕತ್ತಿ ಅವರು ರಾಜೀನಾಮೆ ನೀಡಿರುವದು ಹಲವಾರು ಚರ್ಚೆಗಳಿಗೆ ಕಾರವಾಗಿದೆ.
ಕೆಲಸದ ಒತ್ತಡದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ : ನಿಖಿಲ್
ಈ ಕುರಿತು ನಿಖಿಲ್ ಕತ್ತಿ ಅವರು ನಮ್ಮ ಪ್ರತಿನಿಧಿ ಜೊತೆ ಮಾತನಾಡುತ್ತ, ಶಾಸಕ ಸ್ಥಾನದ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಹಾಗೂ ಕ್ಷೇತ್ರದ ಜನರ ಕೆಲಸ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ತಮಗೆ ಕಾರಖಾನೆಯ ಅಧ್ಯಕ್ಷ ಸ್ಥಾನ ನಿಭಾಯಿಸಲು ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ತಾವು ಅಧ್ಯಕ್ಷ ಸ್ಥಾನಕ್ಕೆ ಸ್ವ ಇಚ್ಚೆ ಯಿಂದ ರಾಜೀನಾಮೆ ಸಲ್ಲಿಕೆ ಮಾಡಿರುವದಾಗಿ ಹೇಳಿಕೆ ನೀಡಿದ್ದಾರೆ.
ಹಿರಣ್ಯಕೇಶಿ ಕಾರಖಾನೆಯನ್ನು ಮುನ್ನಡೆ ಸಲು ಖಾಸಗಿಯವರಿಗೆ ಗುತ್ತಿಗೆ ಆಧಾರದ (ಲೀಜ್) ಮೇಲೆ ನೀಡುವ ಬಗ್ಗೆ ಆಡಳಿತ ಮಂಡಳಿಯ ಕೆಲ ಸದಸ್ಯರಿಂದ ವಿರೋಧ ವ್ಯಕವಾದ ಹಿನ್ನೆಲೆಯಲ್ಲಿ ಸಹಕಾರ ತತ್ವದ ಅಡಿಯಲ್ಲಿ ಮುನ್ನಡೆಸಲು ತೀರ್ಮಾನಿಸಲಾಗಿದೆ.
ಬರುವ 15 ದಿನಗಳಲ್ಲಿ ಕಾರಖಾನೆಯ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಲಿದ್ದು, ನೂತನ ಅಧ್ಯಕ್ಷರು ಕಾರಖಾನೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಸಾಗಲಿದ್ದಾರೆ. ಇದಕ್ಕೆ ನಾನು ಕೂಡಾ ಸಹಕಾರ ನೀಡುವದಾಗಿ ನಿಖಿಲ್ ಕತ್ತಿ ಅವರು ತಿಳಿಸಿದ್ದಾರೆ.