ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ: ಒಬ್ಬ ವ್ಯಕ್ತಿ ಸಾವು

Blast at arms factory: One person killed

ಭಂಡಾರಾ 24: ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಜವಾಹರ್ ನಗರ ಪ್ರದೇಶದಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯ  ಎಲ್‌ಟಿಪಿ ವಿಭಾಗದಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 10 ಉದ್ಯೋಗಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಪಾರುಗಾಣಿಕಾ ಮತ್ತು ವೈದ್ಯಕೀಯ ಸಿಬ್ಬಂದಿ ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದರೆ, ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ. ಸ್ಫೋಟದ ತೀವ್ರತೆ ಎಷ್ಟು ಇತ್ತೆಂದರೆ ಸುಮಾರು 5 ಕಿಮೀ ದೂರದ ವರೆಗೆ ಶಬ್ದ ಕೇಳಿಸಿತು. ಫ್ಯಾಕ್ಟರಿಯಿಂದ ದಟ್ಟ ಹೊಗೆ ಏಳುತ್ತಿರುವುದು ದೂರದಿಂದ ಸೆರೆ ಹಿಡಿದಿರುವ ವಿಡಿಯೋದಲ್ಲಿ ಕಂಡು ಬಂದಿದೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿನ ಸ್ಫೋಟ ಸಂಭವಿಸಿದ ಪರಿಣಾಮ ಘಟಕದ ಮೇಲ್ಛಾವಣಿ ಕುಸಿದು 13 ರಿಂದ 14 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾಹಿತಿ ನೀಡಿದ್ದಾರೆ.

ಈ ಸಂಬಂಧ  ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಘಟನಾ ಸ್ಥಳದಿಂದ ಐದು ಜನರನ್ನು ರಕ್ಷಿಸಲಾಗಿದೆ ಮತ್ತು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದಾರೆ, ನಾಗ್ಪುರದಿಂದ ರಾಜ್ಯ ವಿಪತ್ತು ತಂಡ ಸ್ಥಳಕ್ಕಾಗಮಿಸುತ್ತಿದೆ ಎಂದಿದ್ದಾರೆ.

ಕಾರ್ಖಾನೆ ಆವರಣದಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಸಂಜಯ್ ಕೋಲ್ಟೆ ತಿಳಿಸಿದ್ದಾರೆ. ಮೇಲ್ಛಾವಣಿ ಕುಸಿದಿದ್ದು, ಅವಶೇಷಗಳನ್ನು ತೆಗೆಯಲು ಅಗೆಯುವ ಯಂತ್ರವನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.