ನಾಡಪ್ರಭು ಕೆಂಪೇಗೌಡರ ಆಡಳಿತ ಇಡೀ ವಿಶ್ವಕ್ಕೆ ಮಾದರಿ : ಸತೀಶ ಸೈಲ್

ಕಾರವಾರ 27: ಆದರ್ಶ ಆಡಳಿತಗಾರ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಆಡಳಿತವು ಇಡೀ ವಿಶ್ವಕ್ಕೆ ಮಾದರಿ ಎಂದು ಕರ್ನಾಟಕ ಮಾರ್ಕೇಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ  ಹಾಗೂ ಶಾಸಕ ಸತೀಶ ಕೆ ಸೈಲ್ ಹೇಳಿದರು. 

ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. 

ನಾಡಪ್ರಭು ಕೆಂಪೇಗೌಡರು ಆಡಳಿತದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಕೆರೆ-ಕಟ್ಟೆಗಳು, ದೇವಸ್ಥಾನಗಳು, ಸ್ಮಾರಕಗಳನ್ನು ನಿರ್ಮಾಣ ಮಾಡಿ ಬೆಂಗಳೂರು ನಗರವನ್ನು ಇಡೀ ವಿಶ್ವದಲ್ಲಿಯೇ ಮಾದರಿ ನಗರವಾಗಿ ನಿರ್ಮಿಸುವ ಮೂಲಕ ಬೆಂಗಳೂರು ನಗರದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.  

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಮಾತನಾಡಿ, ಕೆಂಪೇಗೌಡರ ಆಡಳಿತ ಮತ್ತು ದೂರದೃಷ್ಟಿಯ ಫಲವೇ ಬೆಂಗಳೂರು ನಗರ. ವಿಜಯನಗರದ ಗತವೈಭವದಿಂದ ಪ್ರೇರೆಪಿತವಾಗಿ ಅದ್ಭುತ ನಗರದ ಕನಸು ಕಂಡು ನಗರ ನಿರ್ಮಾಣ ಮಾಡುವ ಮೂಲಕ ಇಂದು ಎಲ್ಲಾ ಸಮುದಾಯದವರು ಸಹಭಾಳ್ವೆಯಿಂದ ಬದುಕಲು ಆಶ್ರಯ ನೀಡಿದೆ. ಅವರ ದೂರದೃಷ್ಟಿಯ ಆಡಳಿತವನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು. 

ಅಸ್ನೋಟಿಯ ಶಿವಾಜಿ ವಿದ್ಯಾಮಂದಿರದ ಶಿಕ್ಷಕ ಜೆ.ಬಿ ತಿಪ್ಪೇಸ್ವಾಮಿ ಉಪನ್ಯಾಸ ನೀಡಿದರು.  

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಲತಾ ನಾಯ್ಕ್‌, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸತೀಶ್ ನಾಯಕ್, ಜಿಲ್ಲಾಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತಿತರರು ಇದ್ದರು.