ಮೈಸೂರು ಝೂಗೆ ಸಾರ್ವಜನಿಕರಿಂದ 73.16 ಲಕ್ಷ ರೂ.ದೇಣಿಗೆ

ಮೈಸೂರು, ಏ.29,ಲಾಕ್‌ಡೌನ್‌ನಿಂದಾಗಿ ಮೈಸೂರು ಮೃಗಾಲಯಕ್ಕೆ ಪ್ರವಾಸಿಗರಿಲ್ಲದೆ ಆದಾಯ ಖೋತಾವಾಗುತ್ತಿದ್ದುದನ್ನು ಗಮನಿಸಿದ ಸಚಿವ ಎಸ್.ಟಿ.ಸೋಮಶೇಖರ್ ಮಾಡಿಕೊಂಡಿದ್ದ ಮನವಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಇದೀಗ  ಪ್ರಾಣಿಸಂಗ್ರಹಾಲಯಕ್ಕೆ 73.16 ಲಕ್ಷ ಆರ್ಥಿಕ ನೆರವು ಹರಿದುಬಂದಿದೆ.
ಕೊರೋನಾ ಹಿನ್ನೆಲೆಯಲ್ಲಿ ದೇಶವೇ ಲಾಕ್ ಡೌನ್ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರ  ಬಿಸಿ ಮೃಗಾಲಯಗಳಿಗೂ ತಟ್ಟಿದೆ. ಯಾರೂ ಎಲ್ಲಿಯೂ ಸಂಚರಿಸದಿರುವುದರಿಂದ ಪ್ರವಾಸಿಗರ ಆಗಮನ  ಶೂನ್ಯಕ್ಕೆ ಇಳಿದಿದೆ. ಒಂದು ವೇಳೆ ಪ್ರವಾಸಿಗರು ಆಗಮಿಸುತ್ತಿದ್ದರೆ ಪ್ರವೇಶ ಶುಲ್ಕದಿಂದ  ಸಂಗ್ರಹವಾಗುತ್ತಿದ್ದ ಹಣದಿಂದ ಅಲ್ಪ ಮಟ್ಟಿಗೆ ಸಹಾಯವಾಗುತ್ತಿತ್ತು. ಈಗ ಅದೂ  ಇಲ್ಲವಾಗಿದೆ.
ಈ ವಿಷಯ  ಏ.ಪ್ರಿಲ್ 22 ರಂದು ಮೈಸೂರಿನ ಪ್ರಾಣಿ ಸಂಗ್ರಹಾಲಯಕ್ಕೆ ಸಚಿವರು ಭೇಟಿ ಕೊಟ್ಟಾಗ  ಗಮನಕ್ಕೆ ಬಂದಿತ್ತು. ಆಗಲೇ ಅಲ್ಲಿನ ಪರಿಸ್ಥಿತಿಯನ್ನು ಮನಗಂಡ ಸಚಿವರು ತಕ್ಷಣ 1.75  ಲಕ್ಷ ರೂಪಾಯಿ ಹಣವನ್ನು ವೈಯಕ್ತಿಕವಾಗಿ ನೆರವನ್ನು ನೀಡುವ ಮೂಲಕ 5 ವರ್ಷದ ಚಾಮುಂಡಿ ಎಂಬ  ಹೆಣ್ಣಾನೆಯನ್ನು 1 ವರ್ಷದ ಅವಧಿಗೆ ದತ್ತು ಪಡೆದಿದ್ದರು. ಅಲ್ಲದೆ, ಅಲ್ಲಿರುವ 16 ಹುಲಿಗಳ  ಒಂದು ದಿನದ ಮಾಂಸದ ಊಟದ ಖರ್ಚಾದ 25 ಸಾವಿರ ರೂಪಾಯಿಯ ನೆರವನ್ನೂ ನೀಡಿದ್ದರು.
ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮೈಸೂರು ಮೃಗಾಲಯಕ್ಕೆ  ದಾನಿಗಳಿಂದ ದೇಣಿಗೆ ನೀಡುವಂತೆ ವೈಯಕ್ತಿಕವಾಗಿ ಮಾಡಿಕೊಂಡ ಒಂದು ಮನವಿಗೆ ಉತ್ತಮ  ಪ್ರತಿಕ್ರಿಯೆ ಲಭ್ಯವಾಯಿತು. ಈಗ 73 ಲಕ್ಷ 16 ಸಾವಿರ ರೂಪಾಯಿ ಸಂಗ್ರಹವಾಗಿದ್ದು,  ಅದನ್ನು ಮೃಗಾಲಯಕ್ಕೆ ಸ್ವತಃ ಸಚಿವರು ಹಸ್ತಾಂತರ ಮಾಡಿದರು.ಸರ್ಕಾರದ  ಯೋಜನೆಗಳ ಜೊತೆಗೆ ಸಾರ್ವಜನಿಕರ ಸಹಕಾರವನ್ನು ಪಡೆದರೆ ಹೀಗೆಯೂ ಅಭಿವೃದ್ಧಿ  ಕಾರ್ಯಗಳನ್ನು ಕೈಗೊಳ್ಳುವುದು ಎಂಬುದನ್ನು ಈ ಮೂಲಕ ಸಚಿವ ಸೋಮಶೇಖರ್ ಅವರು  ತೋರಿಸಿಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್.ಟಿ.ಸೋಮಶೇಖರ್, ಕೊರೋನಾ  ಹಿನ್ನೆಲೆಯಲ್ಲಿ ಏ. 23 ರಂದು ಅಧಿಕಾರಗಳ ಜೊತೆ ನಾನು ಮೈಸೂರು ಮೃಗಾಲಯಕ್ಕೆ ಭೇಟಿ  ನೀಡಿದ್ದೆ. ಆಗ ಪ್ರಾಣಿ-ಪಕ್ಷಿಗಳಿಗೆ ಆಹಾರ, ನೀರಿನ ಅವಶ್ಯಕತೆ ಹಾಗೂ ಸ್ವಚ್ಛತೆಯ  ನಿರ್ವಹಣೆ ಮಾಡಲು ದಿನಕ್ಕೆ ತಗುಲುವ ವೆಚ್ಚದ ಬಗ್ಗೆ ನನ್ನ ಗಮನಕ್ಕೆ ಬಂತು. ಇವುಗಳ ನಿರ್ವಹಣೆಗೆಂದೇ ಮೃಗಾಯದಲ್ಲಿ ಪಕ್ಷಿ ಪ್ರಾಣಿಗಳನ್ನು
ದತ್ತು  ತೆಗೆದುಕೊಳ್ಳುವ ವ್ಯವಸ್ಥೆ ಇರುವ ಹಿನ್ನೆಲೆಯಲ್ಲಿ ನಿರ್ವಹಣೆಗಾಗಿ ಉದಾರವಾಗಿ ಸಹಾಯ ಮಾಡುವಂತೆ  ನನ್ನ ಮತ ಕ್ಷೇತ್ರವಾದ ಯಶವಂತಪುರ ವಿಧಾನಸಭಾ ಕ್ಷೇತ್ರದ  ಜನರಲ್ಲಿ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿದ ಅನೇಕರು ಮೃಗಾಲಯದಲ್ಲಿನ  ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಳ್ಳಲು ಮುಂದೆ ಬಂದು ಉದಾರ ನೆರವನ್ನು  ನೀಡಿದ್ದಾರೆ. ಪ್ರಾಣಿ ಪ್ರೀತಿಯ ಹೃದಯವಂತರಿಂದ ಒಟ್ಟಾರೆ 73.16 ಲಕ್ಷ ರೂಪಾಯಿ  ಸಂಗ್ರಹವಾಗಿದ್ದು, ಮೃಗಾಲಯಕ್ಕೆ ಹಸ್ತಾಂತರಿಸಿದ್ದೇನೆ. ಕಾಡು ಮೃಗಗಳ ಸಂರಕ್ಷಣೆ  ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದ್ದಾರೆ.