ರೌಡಿಶೀಟರ್ ಪ್ರಕಾಶ್ ಕೊಲೆ: ಮತ್ತೋರ್ವನ ಬಂಧನ

ಬೆಂಗಳೂರು, ಏ. 29,ರೌಡಿಶೀಟರ್ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಕೊಲೆ ಮಾಡಿ ಪರಾರಿಯಾಗಿದ್ದ ಶ್ರೇಯಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗದ ಪೊಲೀಸರು 39 ವರ್ಷದ ಅಮೀರ್ ಅಲಿಯಾಸ್ ಲೋಕೇಶ್ ರೆಡ್ಡಿ, 25 ವರ್ಷದ ನಿಖಿಲ್ ನನ್ನು ಬಂಧಿಸಿದ್ದರು. ಇದೇ ತಿಂಗಳ 21ರಂದು  ತನ್ನ  ಪತಿ ಪ್ರಕಾಶ್ ಅಲಿಯಾಸ್ ಕ್ವಾಟೆ ನನ್ನು ಅಮೀರ್ ಎಂಬಾತ ತನ್ನ ಸಹಚರರೊಂದಿಗೆ ಕೂಡಿಕೊಂಡು  ಮಧ್ಯಾಹ್ನ ಸುರದೇವನಪುರದಿಂದ ಸಿಲ್ವರ್ ಕಾರಿನಲ್ಲಿ ಅಪಹರಿಸಿ, ಮಾರಕಾಸ್ತ್ರಗಳಿಂದ  ಚುಚ್ಚಿ ಕೊಲೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ  ಕೊಲೆಯಾದವ ಪತ್ನಿ ದೂರು ನೀಡಿದ್ದರು.ಕೊಲೆಯಾದ  ಪ್ರಕಾಶ್ ರಾಜಾನುಕುಂಟೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಈತ ತಮ್ಮನ್ನು  ಜೂಜಾಟದಲ್ಲಿ ಮೋಸ ಮಾಡುವುದಲ್ಲದೇ,‌ಲಾಕ್ ಡೌನ್ ಇದ್ದರೂ ಮದ್ಯ ತರುವಂತೆ  ಪೀಡಿಸುತ್ತಿದ್ದನು. ಅಲ್ಲದೇ, ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು. ಹೀಗಾಗಿ  ಆಕ್ರೋಶಗೊಂಡ ತಾವು ಏ.21ರಂದು ಹೆಸರುಘಟ್ಟದ ಮತ್ಕೂರಿಯಲ್ಲಿ ಆತನನ್ನು ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.