ಭುವನೇಶ್ವರ, ಏ 27, ಒಡಿಶಾ ಹೈಕೋರ್ಟ್ ನ 31ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಮೊಹಮ್ಮದ್ ರಫೀಕ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಲೋಕಸೇವಾ ಭವನದೊಳಗೆ ನಡೆದ ಕಾಋ್ಯಕ್ರಮದಲ್ಲಿ ರಾಜ್ಯಪಾಲ ಪ್ರೊ. ಗಣೇಶ್ ಲಾಲ್ ಅವರು ರಫೀಕ್ ಮೊಹಮ್ಮದ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಒಡಿಶಾ ಹೈಕೋರ್ಟ್ ನ ಹಲವು ನ್ಯಾಯಮೂರ್ತಿಗಳು, ರಾಜ್ಯ ಮುಖ್ಯ ಕಾರ್ಯದರ್ಶಿ ಎ.ಕೆ.ತ್ರಿಪಾಠಿ, ಒಡಿಶಾ ಡಿಜಿಪಿ ಅಭಯ, ಅಡ್ವೊಕೇಟ್ ಜನರಲ್ ಅಶೋಕ್ ಪರಿಜ ಮತ್ತಿತರರು ಹಾಜರಿದ್ದರು. ಕಳೆದ ಜನವರಿ 5ರಂದು ನ್ಯಾ.ಕೆ.ಎಸ್.ಝಾವೇರಿ ಅವರ ನಿವೃತ್ತಿ ನಂತರ ಮುಖ್ಯ ನ್ಯಾಯಮೂರ್ತಿಗಳ ಹುದ್ದೆ ಖಾಲಿಯಿತ್ತು. ಮತ್ತು ನ್ಯಾಯಮೂರ್ತಿ ಸಂಜು ಪಾಂಡಾ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೊಲಿಜಿಯಂ ಶಿಫಾರಸಿನ ಮೇರೆಗೆ ನ್ಯಾ. ಮೊಹಮ್ಮದ್ ರಫೀಕ್ ಅವರನ್ನು ಸಿಜೆಯನ್ನಾಗಿ ನೇಮಿಸಿ ಏ.23ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದರು. ಇವರು ಇದಕ್ಕೆ ಮುನ್ನ ಮೇಘಾಲಯ ಹೈಕೋರ್ಟ್ ಸಿಜೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.