ಉದ್ಯೋಗ ಖಾತ್ರಿಯಡಿ ಕೆಲಸ ಒದಗಿಸಲು ಸಚಿವ ಪ್ರಭು ಚೌಹಾಣ್ ಸೂಚನೆ

ಯಾದಗಿರಿ,  ಏಪ್ರಿಲ್ 29, ಜಿಲ್ಲೆಯಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅನೇಕ  ಜನ ಕೂಲಿ ಕಾರ್ಮಿಕರು ಉದ್ಯೋಗ ಇಲ್ಲದೆ, ದಿನನಿತ್ಯದ ಉಪಜೀವನಕ್ಕಾಗಿ  ಕಷ್ಟಪಡುತ್ತಿರುವುದು ಕಂಡು ಬರುತ್ತಿದ್ದು, ಅಂತಹ ಕಾರ್ಮಿಕರಿಗೆ ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸೂಕ್ತ ಕೆಲಸಗಳನ್ನು ನೀಡಬೇಕೆಂದು ಪಶು  ಸಂಗೋಪನೆ, ವಕ್ಫ್, ಹಜ್ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ. ಚೌಹಾಣ್ ತಿಳಿಸಿದ್ದಾರೆ.
ಈ  ಕುರಿತಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ  ಈಗಾಗಲೇ ಸೂಚನೆ ನೀಡಿರುವ ಸಚಿವರು, ಜಿಲ್ಲೆಯ ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್  ಕ್ಷೇತ್ರಗಳು ಸೇರಿದಂತೆ ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿಯೂ ಕುಡಿಯುವ ನೀರಿನ  ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈಗಾಗಲೇ ಕೆಲವು  ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ತಕ್ಷಣವೇ ಅಂತಹ ಗ್ರಾಮಗಳ  ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು  ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥಿತಗೊಳಿಸಬೇಕೆಂದು ನಿರ್ದೇಶನ  ನೀಡಿದ್ದಾರೆ.
ಜನರು ಆರೋಗ್ಯ  ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಲು ಪ್ರೋತ್ಸಾಹಿಸಬೇಕು.  ಜೊತೆಗೆ ಆಯಾ  ತಹಶೀಲ್ದಾರರು ತಮ್ಮ ತಾಲ್ಲೂಕುಗಳಲ್ಲಿ ಜನರಿಗೆ ಪಡಿತರ ವ್ಯವಸ್ಥೆಯಲ್ಲಿ  ವ್ಯತ್ಯಯವಾಗದಂತೆ ಸೂಕ್ತ ನಿಗಾವಹಿಸಬೇಕು. ಪಡಿತರ ಚೀಟಿ ಇಲ್ಲದವರಿಗೂ ಪಡಿತರ  ವಿತರಿಸಬೇಕು. ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿರುವ ನಂದಿನಿ ಹಾಲು ಫಲಾನುಭವಿಗಳಿಗೆ  ದೊರಕಬೇಕು. ತಾಲ್ಲೂಕುಗಳಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯರು ಸದಾ ಸೇವೆಗೆ  ಸಿದ್ಧರಾಗಿರಬೇಕು. ಖಾಸಗಿ ಆಸ್ಪತ್ರೆಗಳು ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಹೊರ  ಜಿಲ್ಲೆ, ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾವಹಿಸುವಂತೆ ಅವರು ಸೂಚಿಸಿದ್ದಾರೆ.