ವಲಸೆ‌ ಕಾರ್ಮಿಕರನ್ನು ಗ್ರಾಮಗಳಿಗೆ ಸ್ಥಳಾಂತರ ; ರಾಜ್ಯದ ವಲಸೆ ಕಾರ್ಮಿಕರು ಎಷ್ಟು, ಹೊರ ರಾಜ್ಯದ ವಲಸೆ ಕಾರ್ಮಿಕರೆಷ್ಟು?

ಬೆಂಗಳೂರು,ಏ 29, ಈಗಾಗಲೇ ಸರ್ಕಾರ ರಾಜ್ಯದ ವಲಸೆ‌ ಕಾರ್ಮಿಕರನ್ನು ತಮ್ಮ ಗ್ರಾಮಗಳಿಗೆ ಹೋಗಲು ಅನುವು ಮಾಡು ತ್ತಿದೆ.ತಮ್ಮ ಊರುಗಳಿಗೆ ಹೋಗಲು ಇಚ್ಚಿಸುವ ಕಾರ್ಮಿಕರನ್ನು ತಪಾಸಣೆ ಮಾಡಿ ಅವರ ಗ್ರಾಮಗಳಿಗೆ ಕಳುಹಿಸಿಕೊಡಲಾಗುತ್ತಿದೆ.ರಾಜ್ಯದ ಒಟ್ಟು ವಲಸೆ ಕಾರ್ಮಿಕರು ಮತ್ತು ಹೊರ ರಾಜ್ಯದ ವಲಸೆ ಕಾರ್ಮಿಕರು ಎಲ್ಲಿ ಎಷ್ಟಿದ್ದಾರೆ ಎಂಬ ಸಮಗ್ರ ವರದಿ ಇಲ್ಲಿದೆ.
ಲಾಕ್‌ಡೌನ್ ನಿಂದ ಅತಿಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವುದು ವಲಸೆ ಕಾರ್ಮಿಕರು. ಸರ್ಕಾರ ಅವರ ಹಿತರಕ್ಷಣೆಗಾಗಿ ಹಲವು ಕಾರ್ಯ ಯೋಜನೆ ರೂಪಿಸಿದೆ.ಇದೀಗ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಅವರನ್ನೂ ತಪಾಸಣೆಗೈದು ರಾಜ್ಯ ಸರ್ಕಾರ ನಮ್ಮ ರಾಜ್ಯದ ವಲಸೆ ಕಾರ್ಮಿಕರಿಗೆ ರಾಜ್ಯದೊಳಗೆ ತಮ್ಮ ಗ್ರಾಮಗಳಿಗೆ ಹೋಗಲು ಅನುಮತಿ ನೀಡುತ್ತಿದೆ. ಇದರಂತೆ ಹಲವು ಜಿಲ್ಲೆಗಳಲ್ಲಿನ ರಾಜ್ಯದ ವಲಸೆ ಕಾರ್ಮಿಕರು ಜಿಲ್ಲಾಧಿಕಾರಿಗಳ ಅನುಮತಿ ಪಡೆದು, ಮಾರ್ಗಸೂಚಿಯನ್ವಯ ಅವರ ಗ್ರಾಮಗಳಿಗೆ ಬಸ್ ಗಳ ಮೂಲಕ ಕಳುಹಿಸಿ ಕೊಡಲಾಗುತ್ತಿದೆ.
ಎಲ್ಲಿ ಎಷ್ಟು ರಾಜ್ಯದ ವಲಸೆ ಕಾರ್ಮಿಕರು :ಈವರೆಗಿನ ಸರ್ಕಾರದ ಅಂಕಿಅಂಶದ ಪ್ರಕಾರ ನಾನಾ ಜಿಲ್ಲೆಗಳಲ್ಲಿರುವ ರಾಜ್ಯದ ವಲಸೆ ಕಾರ್ಮಿಕರು ಸುಮಾರು 5,382 ಮಂದಿ.ಈ ಪೈಕಿ 2,762 ಕಾರ್ಮಿಕರು ಬೆಂಗಳೂರಿನಲ್ಲಿದ್ದರೆ, ಮೈಸೂರಿನಲ್ಲಿ 2,000, ಮಂಗಳೂರು 224 ಹಾಗೂ 99 ಕಾರ್ಮಿಕರು ಬೆಂ.ಗ್ರಾಮಾಂತರದಲ್ಲಿ ಇದ್ದಾರೆ.
ಇನ್ನು ಭಟ್ಕಳದಲ್ಲಿ 40 ಮಂದಿ, ಬೆಳಗಾವಿಯಲ್ಲಿ 41, ಬಳ್ಳಾರಿ 14, ಬಿಜಾಪುರ 14, ಚಾಮರಾಜನಗರ 35, ಚಿಕ್ಕಬಳ್ಳಾಪುರ 20, ಧಾರವಾಡ 21, ರಾಯಚೂರು 22, ರಾಮನಗರ 8, ಶಿವಮೊಗ್ಗ 21, ತುಮಕೂರು 32, ಯಾದಗಿರಿ 8 ಮಂದಿ ರಾಜ್ಯದ ಕಾರ್ಮಿಕರನ್ನು ಗುರುತಿಸಲಾಗಿದೆ. ಬಸ್ ಮೂಲಕ ಸ್ಥಳಾಂತರ :ಆಯಾ ಜಿಲ್ಲಾಡಳಿತ ಇಚ್ಚಿಸಿದ ರಾಜ್ಯದ ವಲಸಿಗರನ್ನು ವೈದ್ಯಕೀಯ ತಪಾಸಣೆ ಮಾಡಿ ಅವರ ಗ್ರಾಮಗಳಿಗೆ ಕಳುಹಿಸಿ ಕೊಡುತ್ತಿದ್ದಾರೆ. ಕೆಎಸ್ಆರ್ ಟಿಸಿ ಬಸ್ ಮೂಲಕ 40% ಮೀರದಂತೆ ಮಾಸ್ಕ್, ಸ್ಯಾನಿಟೈಸರ್ ಬಳಸಿ ಜಿಲ್ಲಾಡಳಿತ ಕಾರ್ಮಿಕ ರನ್ನು ಕಳುಹಿಸಿ ಕೊಡುತ್ತಿದೆ. ಆಯಾ ತಾಲೂಕು ಕಚೇರಿಗಳಲ್ಲಿ ಹೋಗಲು ಇಚ್ಚಿಸುವ ಕಾರ್ಮಿಕರ ವಿವರ ಪಡೆದು,ತಪಾಸಣೆ ಮಾಡಿ ಕಳುಹಿಸಿಕೊಡಲಾಗುತ್ತಿದೆ. ಅದರಂತೆ ಬೆಂಗಳೂರು ನಗರದಿಂದ ಈವರೆಗೆ ಸುಮಾರು 60 ರಾಜ್ಯದ ವಲಸೆ ಕಾರ್ಮಿಕರನ್ನು ಅವರ ಗ್ರಾಮಗಳಿಗೆ ಕಳುಹಿಸಿಕೊಡಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ತಿಳಿಸಿದ್ದಾರೆ.
ಹೊರ ರಾಜ್ಯದ ವಲಸೆ ಕಾರ್ಮಿಕರು ಎಷ್ಟು?:
ರಾಜ್ಯದಲ್ಲಿ ಈವರೆಗೆ ಗುರಿತಿಸಲ್ಪಟ್ಟಂತೆ ಸುಮಾರು ವಿವಿಧ ರಾಜ್ಯಗಳ 1,17,730 ಕಾರ್ಮಿಕರು ರಾಜ್ಯದ ವಿವಿಧೆಡೆ ವಾಸವಾಗಿದ್ದಾರೆ. ಈ ಪೈಕಿ 92,559 ಹೊರ ರಾಜ್ಯದ ವಲಸೆ ಕಾರ್ಮಿಕರು ಬೆಂಗಳೂರು ನಗರದಲ್ಲೇ ಇದ್ದಾರೆ.ಈ ಪೈಕಿ ಒರಿಸ್ಸಾದವರು ಅತಿ ಹೆಚ್ಚು ವಲಸೆ ಕಾರ್ಮಿಕರು ಅಂದರೆ 52,993 ಮಂದಿ ರಾಜ್ಯದಲ್ಲಿದ್ದಾರೆ.  ಬಳಿಕದ ಸ್ಥಾನ ಬಿಹಾರಿ ಕಾರ್ಮಿಕರು. 37,446 ಬಿಹಾರಿ ಕಾರ್ಮಿಕರಿದ್ದಾರೆ. ಅದರಲ್ಲಿ ಬೆಂಗಳೂರಲ್ಲೇ 33,691 ಬಿಹಾರಿ ಕಾರ್ಮಿಕರು ವಾಸವಿದ್ದಾರೆ.ಜಾರ್ಖಂಡ್ ನಿಂದ 17,942 ಕಾರ್ಮಿಕರು ರಾಜ್ಯದ ವಿವಿಧೆಡೆ ವಾಸವಾಗಿರುವುದು ಪತ್ತೆ ಮಾಡಲಾಗಿದೆ. ಇನ್ನು ಬಾಂಗ್ಲಾದೇಶಿ ಕಾರ್ಮಿಕರು 833 ಇದ್ದು,ಎಲ್ಲರೂ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ.ಉಳಿದಂತೆ ಮಧ್ಯಪ್ರದೇಶ 2583,ಉತ್ತರಪ್ರದೇಶದ 1570,ಪಶ್ಚಿಮ ಬಂಗಾಳದ 2310 ಕಾರ್ಮಿಕರನ್ನು ಗುರುತಿಸಲಾಗಿದೆ.