ಚಿತ್ರದುರ್ಗ, ಏಪ್ರಿಲ್ 28, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ಇಂದು ಚಿತ್ರದುರ್ಗಕ್ಕೆ ಭೇಟಿ ನೀಡಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ನ್ಯಾಯ ಬೆಲೆ ಅಂಗಡಿಯವರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಜನರು ಸಂಕಷ್ಟದಲ್ಲಿದ್ದು, ಇಂತಹ ಸಮಯದಲ್ಲಿ ಅವರ ನೆರವಿಗೆ ಧಾವಿಸಬೇಕಾದುದು ನಮ್ಮ ಕರ್ತವ್ಯ. ಆದ್ದರಿಂದ ಪಡಿತರ ವಿತರಣೆಯಲ್ಲಿ ಯಾವುದೇ ತಾರತಮ್ಯ, ಮೋಸ ಮಾಡದೆ ಸಮಯಕ್ಕೆ ಸರಿಯಾಗಿ ಪಡಿತರ ವಿತರಿಸಬೇಕು ಎಂದು ಸೂಚಿಸಿದರು. ಪಡಿತರ ನೀಡಲು ನ್ಯಾಯಬೆಲೆ ಅಂಗಡಿ ಮಾಲೀಕರು ಜನರ ಬಳಿ ಹಣ ಪಡೆಯುವುದು, ತೂಕದಲ್ಲಿ ವ್ಯತ್ಯಾಸ ಮಾಡುವುದು, ಬರುವ ಲೋಡ್ ಗಳಲ್ಲೂ ತೂಕದಲ್ಲಿ ವ್ಯತ್ಯಾಸ ಇರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಯಾವುದೇ ಕಾರಣಕ್ಕೂ ಇನ್ನು ಮುಂದೆ ಬಡ ಜನರ ಬಳಿ ಹಣ ಪಡೆಯುವುದು ಮತ್ತು ತೂಕದಲ್ಲಿ ವ್ಯತ್ಯಾಸ ಮಾಡುವುದು, ಅವರಿಗೆ ರೇಷನ್ ನೀಡದೆ ಹಾಗೇ ಕಳಿಸುವುದು ತಮ್ಮ ಗಮನಕ್ಕೆ ಬಂದರೆ ಅಂತಹ ನ್ಯಾಯಬೆಲೆ ಅಂಗಡಿಯವರ ಮತ್ತು ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಕೊರೋನಾ ಸಂಕಷ್ಟದಿಂದ ಬಡ ಜನರು ತೊಂದರೆಯಲ್ಲಿ ಇದ್ದಾರೆ. ಹಾಗಾಗಿ ಅವರಿಗೆ ಯಾವುದೇ ರೀತಿಯಲ್ಲೂ ಮೋಸ ಮಾಡದೆ ಪಡಿತರವನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆಜ್ಞೆ ಮಾಡಿದರು.
ನ್ಯಾಯಬೆಲೆ ಅಂಗಡಿ ಮಾಲಿಕರು ತಪ್ಪು ಮಾಡುತ್ತಿರುವುದು ಕಂಡುಬಂದರೆ ಅವರ ಮೇಲೆ ತಕ್ಷಣ ಕ್ರಮ ಜರುಗಿಸಿ ಪರವಾನಿಗೆ ರದ್ದುಪಡಿಸಬೇಕು ಎಂದು ಮೇಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಚಿತ್ರದುರ್ಗ ರಾಗಿ ಬೆಳೆಗಾರರು ಹೆಚ್ಚಾಗಿರುವ ಜಿಲ್ಲೆಯಾಗಿದ್ದು, ನಮ್ಮ ಇಲಾಖೆಯೇ ರೈತರಿಂದ ನೇರವಾಗಿ ರಾಗಿಯನ್ನು ಖರೀದಿಸಿ, ಪಡಿತರದಾರರಿಗೆ ಹಂಚಲು ನಿರ್ಧರಿಸಿದೆ. ಹಾಗಾಗಿ ರಾಗಿಯಲ್ಲಿ ಯಾವುದೇ ಕಲಬೆರಕೆ ಇರಬಾರದು. ಯಾಕೆಂದರೆ ರಾಗಿಯಲ್ಲಿ ಮಣ್ಣನ್ನು ಬೆರೆಸಿ ನೀಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ಅಧಿಕಾರಿಗಳು ಇದರ ಬಗ್ಗೆ ಗಮನ ಅರಿಸಿ ಕ್ರಮತೆಗೆದು ಕೊಳ್ಳಬೇಕು. ಇಲ್ಲದಿದ್ದರೆ ತಾವೇ ಎರಡು ದಿನ ಈ ಜಿಲ್ಲೆಗೆ ಬಂದು ಎರಡು ದಿನ ಇಲ್ಲೇ ಉಳಿದುಕೊಂಡು ಪರಿಶೀಲನೆ ಮಾಡಿ ಕ್ರಮಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು. ಸಭೆ ನಂತರ ಸಚಿವರು ಅಲ್ಲಿನ ಸ್ಥಳಿಯ ಅಕ್ಕಿ ಗೋದಾಮಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಹಾಗೂ ಗೂಳಿಹಟ್ಟಿಶೇಖರ್, ಮಾಜಿ ಸಂಸದ ಚಂದ್ರಪ್ಪ,ಜಿಲ್ಲಾ ಅಧಿಕಾರಿ ವಿನೋದ್ ಪ್ರಿಯ ಹಾಗೂ ಸ್ಥಳಿಯ ಅಧಿಕಾರಿಗಳು ಭಾಗವಹಿಸಿದ್ದರು.