ಲೋಕದರ್ಶನ ವರದಿ
ಕಾರವಾರ, 20: ಮಾರುಕಟ್ಟೆಗೆ ಈ ಸಲ ಮಾವಿನ ಹಣ್ಣು ತಡವಾಗಿ ಬಂದಿದ್ದರೂ, ವ್ಯಾಪಾರ ಜೋರಾಗಿದೆ. ಮಾರ್ಚ ತಿಂಗಳಾಂತ್ಯಕ್ಕೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾವಿನ ಹಣ್ಣು ಈ ಸಲ ಎಪ್ರಿಲ್ ಮುಗಿದರೂ ಸುಳಿವಿರಲಿಲ್ಲ. ಮೇ ಮೊದಲ ವಾರದಲ್ಲಿ ಕೆಲವೇ ಜನ ವ್ಯಾಪಾರಿಗಳು ಮಾವಿನ ಹಣ್ಣು ಮಾರುತ್ತಿದ್ದರು. ಮೇ ಎರಡನೇ ವಾರದಲ್ಲಿ ಬಗೆ ಬಗೆಯ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ದರದ ಏರಿಳಿತದ ನಡುವೆಯೂ ಮಾವಿನ ಹಣ್ಣನ್ನು ಜನರು ಕೊಳ್ಳಲು ಹಿಂದೇಟು ಹಾಕಲಿಲ್ಲ. ಒಂದೆಡೆ ಉರಿ ಬಿಸಿಲಲ್ಲಿ ಕುಳಿತು ವ್ಯಾಪಾರ ಮಾಡುವ ಮಹಿಳೆಯರು ಹಾಗೂ ಮಾವು ಕೊಳ್ಳಲು ಬಂದವರು ಬೆವರು ಸುರಿಸುತ್ತಲೇ ಮಾವು ಕೊಂಡದ್ದು ಮಾತ್ರ ವಿಶೇಷ.
ಮಾವು ಕೈಗೆ ಸಿಗದೇ ಕಂಗಾಲಾದ ರೈತರು:
ಮಾವಿನ ಬೆಳೆ ಕಳೆದ ವರ್ಷಕ್ಕಿಂತ ಕಡಿಮೆ. ಈ ಸಲ ಬಂದಷ್ಟು ಮಾವು ಮಾರುಕಟ್ಟೆಗೆ ಬಂದದ್ದು ಸಹ ತಡ, ಹಾಗಾಗಿ ಮಾವಿನ ಹಣ್ಣು ಅಂತ ಉತ್ಸಾಹವನ್ನು ಜನರಲ್ಲಿ ಹುಟ್ಟುಹಾಕಲಿಲ್ಲ. ಬಂದಷ್ಟೇ ಮಾವಿನ ಹಣ್ಣನ್ನು ವ್ಯಾಪಾರಿಗಳು ಮಾರುಕಟ್ಟೆಗೆ ತಂದು ಅದನ್ನು ಮಾರಲು ಹರ ಸಾಹಸ ಪಟ್ಟರು. ಬಂದದ್ದೇ ಕಡಿಮೆ ಹಣ್ಣಾದ್ದರಿಂದ ಲಾಭ ಮಾಡಿಕೊಂಡು ಮಾರಲು ವ್ಯಾಪಾರಿಗಳು ಒದ್ದಾಡಿದರು. ಆರಂಭದಲ್ಲಿ 600 ರೂ.ಡಜನ್ ಇದ್ದ ಮಾವು ಕೊನೆಗೆ ಎರಡು ದಿನಗಳಿಂದ 450 ರೂ.ಗಳಿಗೆ ಡಜನ್ ಹಣ್ಣು ಎಂಬ ದರಕ್ಕೆ ಬಂದು ನಿಂತಿದೆ.
ಕರಿ ಇಶಾಡಕ್ಕೆ ಭಾರೀ ಬೆಲೆ:
ಕರಿ ಇಶಾಡ ಮಾವಿನ ಹಣ್ಣು ಅಂಕೋಲಾದ ವಿಶಿಷ್ಟ ತಳಿ. ಕರಿ ಇಶಾಡ ಹಣ್ಣಿನ ಶೀಕರಣಿ ಮತ್ತು ಹಾಗೆ ತಿನ್ನುವುದೇ ಸೊಗಸು ಅಂತಾರೆ ಹಣ್ಣಿನ ಗ್ರಾಹಕ ಸುರೇಂದ್ರ ಶೆಟ್ಟಿ.
ಈ ಜಾತಿಯ ಹಣ್ಣಿಗೆ ಆರಂಭದಲ್ಲಿ 600 ರೂ. ಇತ್ತು. ಈಗ 450 ರೂ.ಗಳಿಗೆ ಡಜನ್ ಹಣ್ಣು ಸಿಗುತ್ತಿದೆ. ಅಪೋಸ್ ಹಣ್ಣು 200 ರಿಂದ 250 ರೂ.ಗಳಿಗೆ ಡಜನ್ ಹಣ್ಣು ಮಾರಾಡ ವಾಗುತ್ತಿದೆ. ಮುಶ್ರಾದ್ ಎಂಬ ತಳಿಯ ಮಾವು ಡಜನ್ ಹಣ್ಣಿಗೆ 250 ರೂ.ದಿಂದ 300 ರೂ.ತನಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಸ್ಥಳೀಯ ತಳಿಯ ಹಣ್ಣುಗಳು 200 ರಿಂದ 150 ರೂ.ಗೆ ಡಜನ್ ನಂತೆ ಮಾರಾಟವಾಗತ್ತಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಯಮುನವ್ವ ವಡ್ಡರ.
ರಸ್ತೆ ಬದಿಯಲ್ಲಿ ಮಾವಿನ ಹಣ್ಣಿನ ಬುಟ್ಟಿಗಳು ತುಂಬಿದ್ದು, ಈ ತಿಂಗಳ ಅಂತ್ಯದ ವರೆಗೆ ಮಾತ್ರ ಮಾವಿನ ಹಣ್ಣಿನ ಸುಗ್ಗಿ. ಮಳೆಗಾಲ ಆರಂಭವಾದರೆ ಹಣ್ಣಿನ ರುಚಿ ಸಪ್ಪೆಯಾಗಲಿದ್ದು , ಈ ತಿಂಗಳಾಂತ್ಯದವರೆಗೆ ಮಾಡಿದ್ದು ಮಾತ್ರ ವ್ಯಾಪಾರ ಎನ್ನುತ್ತಾರೆ ಹಣ್ಣಿನ ವ್ಯಾಪಾರಿಗಳು. ತಿಂಗಳು ಗಟ್ಟಲೆ ನಡೆಯುತ್ತಿದ್ದ ವ್ಯಾಪಾರ ಈಗ 20 ದಿನಕ್ಕೆ ಮಾತ್ರ ಬಂದಿದೆ. ಈ 20 ದಿನಗಳಲ್ಲೇ ಹಣ್ಣಿನ ವ್ಯಾಪಾರ ನಾಡಿಕೊಳ್ಳಬೇಕಿದೆ
ಎನ್ನುತ್ತಿದ್ದಾರೆ.