ಬೆಂಗಳೂರು, ಜೂ 9, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಜೀವಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.ಜೀವಬೆದರಿಕೆ ಕರೆ ಬಗ್ಗೆ ಚರ್ಚಿಸಿದ ರಾಜ್ಯ ಕಾಂಗ್ರೆಸ್ ನಾಯಕರು, ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಎರಡು ವರ್ಷಗಳ ಹಿಂದೆ ದೆಹಲಿಯಲಿದ್ದ ತಮಗೆ ಬೆದರಿಕೆ ಕರೆ ಬಂದಿತ್ತು. ಆಗ ಲೋಕಸಭೆ ಸ್ಪೀಕರ್ ಹಾಗೂ ಪ್ರಧಾನಿಯವರ ಗಮನಕ್ಕೆ ತಂದು ದೆಹಲಿಯ ತುಘಲಕ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಈ ಬಗ್ಗೆ ಇನ್ನೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದೆ. ಈಗ ಮತ್ತೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಪುತ್ರ ಪ್ರಿಯಾಂಕ್ ಖರ್ಗೆಗೂ ಕರೆ ಮಾಡಿ ಬೆದರಿಕೆ ಹಾಕಿದ್ದು, ಪ್ರಿಯಾಂಕ್ ಖರ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಪೊಲೀಸರು ಏನು ಮಾಡುತ್ತಾರೆಯೋ ನೋಡೋಣ ಎಂದರು.
ಯಾರು ಕರೆ ಮಾಡಿದ್ದಾರೆ ಎನ್ನುವುದನ್ನು ಪೊಲೀಸರು ಪತ್ತೆ ಹೆಚ್ಚಬೇಕು. ಸರ್ಕಾರದ ಬಳಿ ಎಲ್ಲಾ ಮಾಹಿತಿ ಸಿಗಲಿದೆ. ಸರ್ಕಾರ ತನಿಖೆ ನಡೆಸಿ ಕರೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಿಒಡಿ ತನಿಖೆಗೆ ಇದನ್ನ ವಹಿಸಬೇಕು ಒಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನಿರಾಕರಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಸರ್ಕಾರ ಒಬ್ಬರಿಗೊಂದು ಮತ್ತೊಬ್ಬರಿಗೊಂದು ನಿಯಮ ಮಾಡುತ್ತಿದೆ. ಪಶ್ಚಿಮಬಂಗಾಳದಲ್ಲಿ ಅಮಿತ್ ಶಾ ಕಾರ್ಯಕ್ರಮ ಮಾಡಬಹುದು. ಆದರೆ ಕಾಂಗ್ರೆಸ್ ನವರು ಮಾಡುವಂತಿಲ್ಲ ಎಂದರೆ ಹೇಗೆ? ಪಶ್ಚಿಮ ಬಂಗಾಳ, ದೆಹಲಿಯಲ್ಲಿ ಬಿಜೆಪಿ ನಾಯಕರು ಜಾಥಾ ನಡೆಸಲು ಅವಕಾಶ ನೀಡಿದ್ದು ಯಾವ ರೀತಿಯ ನ್ಯಾಯ? ಎಂದು ಪ್ರಶ್ನಿಸಿದರು.
ಬಿಜೆಪಿಯದ್ದು ಪ್ರಜಾಪ್ರಭುತ್ವದ ವಿರೋಧಿ ಧೋರಣೆ ನೀತಿ. ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ .ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವುದೇ ಆದಲ್ಲಿ ಪದಗ್ರಹಣಕ್ಕೆ ಅವಕಾಶ ಕೊಡಬೇಕು. ಪದೇಪದೇ ಪದಗ್ರಹಣಕ್ಕೆ ಅವಕಾಶ ನಿರಾಕರಿಸುವುದನ್ನು ನೋಡಿದರೆ ಇದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ವಿಧಾನಸಭೆ ಮುಖ್ಯ ಸಚೇತಕ ಅಜಯ್ ಸಿಂಗ್ ಮಾತನಾಡಿ, ಅಪರಿಚಿತರಿಂದ ಬೆದರಿಕೆ ಕರೆ ಬಂದಿರುವುದು ಆತಂಕಕಾರಿ. ಕಾಂಗ್ರೆಸ್ ನ ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅಂತವರಿಗೆ ಜೀವಬೆದರಿಕೆ ಕರೆ ಬಂದರೆ ಹೇಗೆ? ಇದು ಸಣ್ಣ ವಿಚಾರವಲ್ಲ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕೂಡಲೇ ಇತ್ತ ಗಮನ ಹರಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಶಾಸಕ ಪ್ರಿಯಾಂಕ ಖರ್ಗೆ ಮಾತನಾಡಿ, ಜೂನ್ 7 ರಂದು ತಮಗೂ ಮತ್ತು ತಂದೆಯವರಿಗೆ ದೂರವಾಣಿ ಮೂಲಕ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿದ್ದೇನೆ. ಈ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತನಾಡುವುದಾಗಿ ಸ್ಪಷ್ಟಪಡಿಸಿದರು.
ಈ ಹಿಂದೆ ಕೆನಾಡದಿಂದಲೂ ಬೆದರಿಕೆ ಕರೆ ಬಂದಿತ್ತು. ಕೆಲವೊಂದು ಕಾಲ್ ರೆಕಾರ್ಡ್ ಇರುವುದಿಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುವುದಾಗಿ ಹೇಳಿದರು. ಅನಾಮಧೇಯ ಕರೆ ಮಾಡಿರುವ ದುರುಳರಿಗೆ ರಾಜಕೀಯ ಉದ್ದೇಶವಿತ್ತು ಎಂದನಿಸುತ್ತದೆ. ಏನೇ ಆದರೂ ನಮ್ಮ ತತ್ವ ಸಿದ್ದಾಂತಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮನ್ನು ಹೆದರಿಸಿ ಬೆದರಿಸಿ ಏನೋ ಸಾಧಿಸುತ್ತೇವೆ ಎಂದು ಅವರು ಭಾವಿಸಿದ್ದರೆ ಅದೆಲ್ಲ ಸುಳ್ಳು.ಯಾವುದಕ್ಕೂ ನಾವು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಈ ಹಿಂದೆಯೂ ಅವರಿಗೆ ಬೆದರಿಕೆ ಕರೆ ಬಂದಿತ್ತು. ಬೇಹುಗಾರಿಕೆ ವ್ಯವಸ್ಥೆ ಇದ್ದರೂ ಕೇಂದ್ರ ಇದನ್ನು ಪತ್ತೆ ಮಾಡುವಲ್ಲಿ ವಿಫಲವಾಗಿದೆ. ಕರೆ ಮಾಡಿರುವವರನ್ನು ಬಂಧಿಸಬೇಕು. ಬೆದರಿಕೆ ಹಾಕಿರುವ ದುಷ್ಟಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ ಈವರೆಗಿನ ವಿಳಂಬ ಧೋರಣೆ ಗಮನಿಸಿದರೆ ಕಾನೂನು ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷರ ಪದಗ್ರಹಣಕ್ಕೆ ಸರ್ಕಾರದಿಂದ ಅವಕಾಶ ನಿರಾಕರಣೆಗೆ ಕಿಡಿಕಾರಿದ ಖಂಡ್ರೆ, ಎರಡು ಬಾರಿ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿಲ್ಲ. ಈಗಲೂ ಅವಕಾಶವನ್ನ ನಿರಾಕರಿಸಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಮೇಲೆ ಲಾಕ್ ಡೌನ್ ಮಾರ್ಗಸೂಚಿಯ ನಿಯಮ ಎಂದು ಕಾರ್ಯಕ್ರಮಕ್ಕೆ ಅವಕಾಶ ನೀಡದೇ ಇರುವುದು ರಾಜಕೀಯ ದುರುದ್ದೇಶವಾಗುತ್ತದೆ. ಕೂಡಲೇ ಸರ್ಕಾರ ಕಾರ್ಯಕ್ರಮಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.