ಸಂಗೀತದ ಇಂಪಿನಿಂದ ರೋಗಿಗಳು ಗುಣಮುಖರಾಗುತ್ತಾರೆ : ಕಟ್ಟಿ

Sick people are cured by the love of music : Katti

ಸಂಗೀತದ ಇಂಪಿನಿಂದ ರೋಗಿಗಳು ಗುಣಮುಖರಾಗುತ್ತಾರೆ : ಕಟ್ಟಿ 

ಧಾರವಾಡ 20: ಸಂಗೀತ ಕೇಳುವುದರಿಂದ ಮತ್ತು ಅದರ ಇಂಪಿನಿಂದ ರೋಗಿಗಳು ಗುಣಮುಖರಾಗಿದ್ದನ್ನು ಕಾಣಬಹುದು ಎಂದು ಧಾರವಾಡ ಕರ್ನಾಟಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ. ಎಚ್‌.ಎ. ಕಟ್ಟಿ ಹೇಳಿದರು.  

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಉತ್ತರಾದಿಮಠ ದತ್ತಿ ಕಾರ್ಯಕ್ರಮದ ಪೂರ್ವಭಾವಿಯಾಗಿ ಮಹಿಳಾ ಮತ್ತು ಭಜನಾ ಮಂಡಳಿಗಳಿಗಾಗಿ ಆಯೋಜಿಸಿದ್ದ ಹರಿದಾಸರು ರಚಿಸಿದ ವಿನಾಯಕನ ಹಾಡುಗಳ ಸ್ಪರ್ಧೆಯನ್ನು ಖಂಜೀರಾ ನುಡಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  

ಸಂಗೀತಕ್ಕೆ ಒಂದು ಸತ್ ಪರಂಪರೆ ಇದೆ. ಸಂಗೀತ ಆಲಿಸುವುದರಿಂದ ಆರೋಗ್ಯ ಸುಧಾರಣೆ ಮತ್ತು ಮನಸ್ಸು ಹಗುರವಾಗುತ್ತದೆ, ಆನಂದವಾಗುತ್ತದೆ. ಜೀವನ ಪಾವನ ಮಾಡಿಕೊಳ್ಳಬೇಕೆಂದರೆ ಸಂಗೀತ ಹಾಡಬೇಕು ಇಲ್ಲವೆ ಶಾಂತಚಿತ್ತರಾಗಿ ಕೇಳಬೇಕು. ಬೇರೆ ಬೇರೆ ರಾಗಗಳಿಗೆ ಬೇರೆ ಬೇರೆ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ಮನದ ಶಾಂತಿಗಾಗಿ, ಸಕಲ ಆರೋಗ್ಯ ಭಾಗ್ಯಕ್ಕಾಗಿ ನಾವೆಲ್ಲರೂ ಸಂಗೀತವನ್ನು ಆರಾಧಿಸೋಣ. ಮಹಿಳೆಯರಿಗಾಗಿ ಇಂತಹ ಅಪರೂಪದ ಕಾರ್ಯಕ್ರಮ ಆಯೋಜನೆ ಮಾಡಿರುವ ಸಂಘದ ಕಾರ್ಯವು ಶ್ಲಾಘನೀಯವಾದುದು ಎಂದ ಅವರು ಡಾ. ರಾಜಕುಮಾರ ಅವರೊಂದಿಗಿನ ಭಾವನಾತ್ಮಕ, ಭಕ್ತಿಗೀತೆ ಹಾಡುಗಾರಿಕೆ ಕುರಿತು ಸ್ಮರಿಸಿಕೊಂಡರು.  

ಪ್ರಾರಂಭದಲ್ಲಿ ಕು. ಜಯತಿ ಗುತ್ತಲ ಪ್ರಾರ್ಥಿಸಿದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶೇಷರಾಜ ಗುತ್ತಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರ್ವಹಿಸಿದರು. ಸತೀಶ ತುರಮರಿ ಗೌರವಿಸಿದರು. ಶ್ರೀಮತಿ ಮಾಯಾ ಚಿಕ್ಕೇರೂರ ಕಾರ್ಯಕ್ರಮ ಸಂಯೋಜಿಸಿದರು.  

ಧಾರವಾಡ ಆಕಾಶವಾಣಿ ಮತ್ತು ದೂರವಾಣಿ ಕಲಾವಿದ ಡಾ. ಅನೀಲ ಮೇತ್ರಿ ಹಾಗೂ ಹಿರಿಯ ಸಂಗೀತ ಕಲಾವಿದ ವಾದಿರಾಜ ನಿಂಬರಗಿ ಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.ಸ್ಪರ್ಧೆಯಲ್ಲಿ 25 ಕ್ಕೂ ಹೆಚ್ಚು ಮಹಿಳಾ ಹಾಗೂ ಭಜನಾ ಮಂಡಳಗಳು ಭಾಗವಹಿಸಿದ್ದು ವಿಶೇಷವಾಗಿತ್ತು.