ಮೆಜೆಸ್ಟಿಕ್‌ನಲ್ಲಿ ಬಸವಳಿದು ಕುಳಿತಿದ್ದವರಿಗೆ ಅನ್ನ, ನೀರು ನೀಡಿ ನೆರವಾದ ಪೊಲೀಸರು

ಬೆಂಗಳೂರು, ಮೇ 3,ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ನಗರದ ಮೆಜೆಸ್ಟಿಕ್‌ಗೆ ಅನ್ನ ಆಹಾರವಿಲ್ಲದೆ ಬಂದು ಜಮಾಯಿಸಿದ್ದರು. ಇಂತಹ ಸಂಕಷ್ಟದಲ್ಲಿ ಪೊಲೀಸರು ಹಸಿದವರಿಗೆ ಅನ್ನ, ನೀರು ನೀಡಿ ಮಾನವೀಯತೆ ಮೆರೆಯುತ್ತಿದ್ದ  ದೃಶ್ಯಗಳು ಮೆಜೆಸ್ಟಿಕ್‍ನ ನಿಲ್ದಾಣದಲ್ಲಿ ಕಂಡುಬಂದವು.ನಗರದ  ವಿವಿಧ ಪ್ರದೇಶಗಳಿಂದ ನೂರಾರು ಜನರು ರಾತ್ರಿಯೇ ಮೆಜೆಸ್ಟಿಕ್‍ಗೆ ಬಂದು ತಲುಪಿದ್ದರು.  ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ಊಟ, ನಿದ್ದೆಯಿಲ್ಲದೆ ಈಡೀ ರಾತ್ರಿ ಜಾಗರಣೆ  ಮಾಡಿದರು. ಅವರ ಹಸಿವಿನ ಸಂಕಟಕ್ಕೆ ಸ್ಪಂದಿಸಿದ ಪೊಲೀಸರು  ಬಿಸ್ಕೇಟ್, ನೀರು ಹಂಚಿದರು. ಜೊತೆಗೆ ಮಕ್ಕಳು ಮತ್ತು ವಯೋವೃದ್ಧರಿಗೆ ಸ್ಯಾನಿಟೈಸರ್  ಹಾಕಿ ಮಾನವೀಯತೆ ಮೆರೆದರು.
ಓರ್ವ ಪೊಲೀಸ್ ಸಿಬ್ಬಂದಿ  ಮಗುವನ್ನು ಎತ್ತಿಕೊಂಡು ಕುಳಿತಿದ್ದ ಮಹಿಳೆ ಬಳಿ ಹೋಗಿ ಆಹಾರ ನೀಡಿದರು. ಜೊತೆಗೆ  ‘ಹುಷಾರಾಗಿ ನಿಮ್ಮೂರಿಗೆ ಹೋಗಿ. ಪುಟ್ಟ ಮಗು ಇದೆ’ ಎಂದು ಧೈರ್ಯ ತುಂಬಿದ ದೃಶ್ಯಗಳು  ಕಂಡು ಮೆಜೆಸ್ಟಿಕ್‍ನಲ್ಲಿ ಕಂಡು ಬಂದವು. ವಲಸೆ ಕಾರ್ಮಿಕರು,  ತಮ್ಮ ಊರುಗಳಿಗೆ ಹೋಗಲು ಮೆಜೆಸ್ಟಿಕ್‍ಗೆ ಬಂದಿದ್ದ ಜನರು ರಾತ್ರಿಯಲ್ಲಾ ನರಕಯಾತನೆ  ಅನುಭವಿಸುವಂತಾಗಿತ್ತು. ಮಹಿಳೆಯರಿಗೆ ಬಯಲು ಶೌಚವೇ ಗತಿಯಾಗಿತ್ತು. ಕೆಲವರು ಮಕ್ಕಳನ್ನು  ತಮ್ಮ ಪಕ್ಕದಲ್ಲೇ ಮಲಗಿಸಿಕೊಂಡು ರಾತ್ರಿ ಕಳೆದಿದ್ದರು. ಕೆಲವರು ಆಟೋಗಳಿಗೆ ದುಬಾರಿ ಬಾಡಿಗೆ ನೀಡಿ ಮೆಜೆಸ್ಟಿಕ್ ತಲುಪಿದ್ದರೆ, ಇನ್ನು ಕೆಲವರು 7-8 ಕಿ.ಮೀ.ನಡೆದುಕೊಂಡೇ ಬಸ್ ನಿಲ್ದಾಣ ತಲುಪಿದ್ದರು. ಒಟ್ಟಾರೆ ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರು, ಮನೆಗೆಲಸದವರು ಮತ್ತು ಸಣ್ಣಪುಟ್ಟ ಕೆಲಸ ಮಾಡುವವರ ಸಂಕಷ್ಟ ಹೇಳತೀರದ್ದಾಗಿದೆ.