ಮೆಜೆಸ್ಟಿಕ್‌ನಲ್ಲಿ ಇಂದು ಕೂಡ ಜನಜಂಗುಳಿ: ಕಾರ್ಮಿಕರಿಗೆ ಆಹಾರ ಪೊಟ್ಟಣ ವಿತರಿಸಿದ ಲಕ್ಷ್ಮಣ ಸವದಿ, ಆರ್.ಅಶೋಕ

ಬೆಂಗಳೂರು, ಮೇ 4, ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಲ್ಲಿ ಬಾಕಿಯಾಗಿದ್ದ ಕಾರ್ಮಿಕರನ್ನು ಇಂದು ಕೂಡ ಅವರವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ನಡೆಯಿತು.ಕೆಎಸ್‌ಆರ್‌ಟಿಸಿ ಬಸ್‌ ಬಿಡಲಾಗಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ನಿನ್ನೆ ನೂರಾರು ಕಾರ್ಮಿಕರು ನಗರದ ಮೆಜೆಸ್ಟಿಕ್ ಬಸ್  ನಿಲ್ದಾಣಕ್ಕೆ ಆಗಮಿಸಿದ್ದರು. ಇಂದು ಕೂಡ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ನಿನ್ನೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇಂದು ಬೆಳಗ್ಗೆಯೇ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದರು.
ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ಮಾಹಿತಿ ಪಡೆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮತ್ತು ಕಂದಾಯ ಸಚಿವ ಆರ್.ಅಶೋಕ ಮೆಜೆಸ್ಟಿಕ್ ಬಸ್‌ ನಿಲ್ದಾಣಕ್ಕೆ ಆಗಮಿಸಿ ಆಹಾರ ಪೊಟ್ಟಣ ವಿತರಿಸಿದರು. ಎಲ್ಲಾ ಕಾರ್ಮಿಕರಿಗೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಊರುಗಳಿಗೆ ತೆರಳಬೇಕು ಎಂದು ಸಾರಿಗೆ ಸಚಿವರು ಮನವಿ ಮಾಡಿದರು.
ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ್ದ ರಾಜ್ಯ ಸರ್ಕಾರ, ತಮ್ಮ ಊರುಗಳಿಗೆ ಉಚಿತವಾಗಿ ಪ್ರಯಾಣಿಸಲು ನಿನ್ನೆಯಿಂದ ಮೂರು ದಿನಗಳ ಕಾಲ ಅವಕಾಶ ಮಾಡಿಕೊಟ್ಟಿದೆ. ಭಾನುವಾರ ಒಂದೇ ದಿನ 500 ಬಸ್‌ಗಳಲ್ಲಿ 15 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸಂತಸದಿಂದ ಪ್ರಯಾಣ ಮಾಡಿದ್ದರು. ಕಾರ್ಮಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರ ಮತ್ತೆ ಎರಡು ದಿನ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.ಪ್ರತಿಯೊಬ್ಬರ ಹೆಸರು, ಮೊಬೈಲ್ ಸಂಖ್ಯೆ ಪಡೆದು ಆರೋಗ್ಯ ತಪಾಸಣೆ ನಡೆಸಿದ ನಂತರ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಶನಿವಾರ ಬೆಳಿಗ್ಗೆ ಒಪ್ಪಂದದ ಆಧಾರದಲ್ಲಿ ಬಸ್ ಪಡೆದು ಮೂರುಪಟ್ಟು ದರದಲ್ಲಿ ಕಾರ್ಮಿಕರು ಪ್ರಯಾಣ ಮಾಡಿದ್ದರು. ಮಧ್ಯಾಹ್ನದ ನಂತರ ಒಂದು ಕಡೆಯ ದರ ಮಾತ್ರ ಪಡೆದು ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಕಾರ್ಮಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಮಣಿದ ಸರ್ಕಾರ ಉಚಿತ ಬಸ್ ಸೌಲಭ್ಯ ಕಲ್ಪಿಸಿದೆ.