ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು: ಎಸ್.ಟಿ.ಸೋಮಶೇಖರ್ ಭೇಟಿ

ಹಾಸನ, ಏ.27, ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆಗೆ  ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಪ್ರೀತಮ್ ಗೌಡ,  ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಮತ್ತಿತರರು ಇದ್ದರು. ಬಳಿಕ ಮಾತನಾಡಿದ ಸಚಿವರು, ಹೊಸದಾಗಿ  ಕಟ್ಟಿದ ತರಕಾರಿ ಮಾರುಕಟ್ಟೆಯನ್ನು ವೀಕ್ಷಿಸಿದ್ದೇನೆ. ಆಲೂಗಡ್ಡೆ ಬಿತ್ತನೆ ಮಾಡುವ  ಸಂಬಂಧ ಇರುವ ಅಡಚಣೆಯನ್ನು ನೀಗಿಸಲು ಜಿಲ್ಲಾಧಿಕಾರಿಗಳು ಮಂಗಳವಾರ ಸಭೆ ಕರೆದಿದ್ದು,  ಅದನ್ನು ಸರಿಪಡಿಸಲಿದ್ದಾರೆ. ಇನ್ನು ಕೀಟನಾಶಕ ಹಾಗೂ ರಸಗೊಬ್ಬರ ಶೇ. 90ರಷ್ಟು ದಾಸ್ತಾನು  ಇದ್ದು, ಉಳಿದವುಗಳ ಬಗ್ಗೆಯೂ ಗಮನಹರಿಸಲಾಗುವುದು ಎಂದರು.
ಇನ್ನು  ಇಲ್ಲಿ ಹೆಚ್ಚುವರಿ 2 ಎಕರೆ ಜಾಗ ಕೇಳಿದ್ದು, ಮಂಜೂರು ಮಾಡುವ ಬಗ್ಗೆ ಚರ್ಚಿಸಿ  ಗಮನಹರಿಸಲಾಗುವುದು. ಕೋಲ್ಡ್ ಸ್ಟೋರೇಜ್ ಮಂಜೂರಾತಿಗೆ ಕೇಳಲಾಗಿದ್ದು, ಶಾಸಕರು ಗಮನಕ್ಕೆ  ತಂದಿದ್ದಾರೆ. ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಮಂಜೂರು ಮಾಡಲಾಗುವುದು. ಇನ್ನು ನಮ್ಮ  ಇಲಾಖೆಯಿಂದ ಎಪಿಎಂಸಿಗೆ ಬೇಕಾದ ಸಹಕಾರವನ್ನು ಮಾಡಿಕೊಡಲಾಗುವುದು ಎಂದು ಸಚಿವರು  ತಿಳಿಸಿದರು. ರೈತ ಬೆಳೆದ  ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಹಲವು ಬೆಳೆಗಳು ಜಮೀನುಗಳಲ್ಲಿ ಕೊಳೆಯುತ್ತಿದೆ ಎಂಬ  ದೂರುಗಳು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಚಿವರು, ಅಧಿಕಾರಿಗಳ ಸಭೆ  ನಡೆಸಿದ್ದಾರೆ. ಅಂತಹ ಪ್ರಕರಣಗಳ ಸಮೀಕ್ಷೆ ನಡೆಸಿ ವರದಿ ನೀಡಿ ಪರಿಹಾರ ಕೊಡಲು ಸೂಚನೆ  ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.
ಮೇ  3 ರ ಬಳಿಕ ಲಾಕ್ ಡೌನ್ ಮುಂದುವರಿಯುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ,  ಯಾವುದನ್ನು ಸಡಿಲಮಾಡಬಹುದು ಎಂಬುದು ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ  ಬಿಟ್ಟಿರುವಂಥದ್ದು. ಅವರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರವನ್ನು  ತೆಗೆದುಕೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು. ಪೈಪ್  ಬೆಲೆ ಸೇರಿದಂತೆ ಕೃಷಿ ಚಟುವಟಿಕೆಗೆ ಸಂಬಂಧಪಟ್ಟ ಸಲಕರಣೆಗಳ ಬೆಲೆ ಹೆಚ್ಚಳ ಮಾಡಿ  ಮಾರುವಂತಿಲ್ಲ. ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ತಕ್ಷಣ ಮುಲಾಜಿಲ್ಲದೆ ಕ್ರಮ  ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇದೇ  ವೇಳೆ, ರೈತರು ಹಾಗೂ ವರ್ತಕರ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದ ಸಚಿವರು, ಬೆಳೆಗಳ ಸಾಗಾಟ  ವೇಳೆ ಚೆಕ್ ಪೋಸ್ಟ್ ಇಲ್ಲವೇ ಪೊಲೀಸರಿಂದ ತೊಂದರೆಯಾಗುತ್ತಿದೆಯೇ ಎಂದು ಕೇಳಿ  ತಿಳಿದುಕೊಂಡರು. ಜೊತೆಗೆ ವ್ಯಾಪಾರ ಹೇಗೆ ಆಗುತ್ತಿದೆ? ಬೆಳೆದ ಬೆಳೆಗಳಿಗೆ ಸೂಕ್ತ ದರ  ಸಿಗುತ್ತಿದೆಯೇ ಎಂದೂ ಮಾಹಿತಿಯನ್ನು ಸಚಿವರು ಪಡೆದುಕೊಂಡರು.
ಆರಂಭದಲ್ಲಿ  ಎಪಿಎಂಸಿ ಆವರಣದಲ್ಲಿರುವ ವರಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ಪೂಜೆ  ಸಲ್ಲಿಸಿ, ಕೊರೋನಾ ಸಂಕಷ್ಟದಿಂದ ಜನತೆಯನ್ನು ಪಾರು ಮಾಡು ಎಂದು ಕೋರಿಕೊಂಡರು.
ಅಧಿಕಾರಿಗಳೊಂದಿಗೆ ಸಭೆ : ಹಾಸನ ಜಿಲ್ಲೆಯ ಎಪಿಎಂಸಿ ಸಮಸ್ಯೆಗಳ ಬಗ್ಗೆ  ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.  ಮಹಾರಾಷ್ಟ್ರದ ಪುಣೆ ಸೇರಿದಂತೆ ಹೊರ ರಾಜ್ಯಗಳಿಗೆ ಬೆಳೆ ಸಾಗಾಟ ಹಾಗೂ ಮಾರಾಟದಲ್ಲಿ ಯಾವುದಾದರೂ ತೊಂದರೆಯಾಗುತ್ತಿದೆಯೇ ಎಂದು ಸಚಿವರು ಮಾಹಿತಿ ಪಡೆದುಕೊಂಡರು.