ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜಲ್ವಂತ ಸಮಸ್ಯೆಗಳ ಹೆಚ್ಚಿನ ಚರ್ಚೆಯಾಗಲಿ
ಬೆಳಗಾವಿ 09: ಡಿಸೆಂಬರ್ 9ರಿಂದ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜಲ್ವಂತ ಸಮಸ್ಯೆಗಳ ಕುರಿತು ಹೆಚ್ಚಿನ ಚರ್ಚೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ(ಸಂತೋಷ ಅರಳಿಕಟ್ಟಿ ಬಣ)ದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಈ ಚಳಿಗಾಲ ಅಧಿವೇಶನದಲ್ಲಿ ಸಮಗ್ರ ಉತ್ತರ ಕರ್ನಾಟಕದ ನೀರಾವರಿ ಯೋಜನೆ, ರೈತರ ಸಮಸ್ಯೆ, ಕೈಗಾರಿಕೆ, ಶೈಕ್ಷಣಿಕ, ಆರೋಗ್ಯ ಇನ್ನು ಇತ್ಯಾದಿಗಳ ಅಭಿವೃದ್ಧಿ ಕುರಿತು ಚರ್ಚಿಸಿ ಪರಿಹಾರ ನೀಡಬೇಕು. ಬೆಂಗಳೂರಿನ ಪ್ರಮುಖ ಇಲಾಖೆಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕು ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಿಸಬೇಕು. ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹಲವು ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಪರಿಹರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.