ರೈತರು, ಕೃಷಿಕರು ಮತ್ತು ಸಣ್ಣವ್ಯಾಪಾರಿಗಳ ಎಲ್ಲಾ ಸಾಲವನ್ನು ಸರ್ಕಾರ ಮನ್ನಾ ಮಾಡಲಿ: ಎಫ್ಐಟಿಯು

ಬೆಂಗಳೂರು, ಏ.30, 1886 ಮೇ ತಿಂಗಳಲ್ಲಿ ಚಿಕಾಗೊದಲ್ಲಿ ಕಾರ್ಮಿಕರ ಮೇಲೆ ನಡೆದ ಧಮನಕಾರಿ ಘಟನೆಯನ್ನು ಆಧರಿಸಿ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ 134 ವರ್ಷ ಕಳೆದರೂ ಕಾರ್ಮಿಕರ ಮೇಲಿನ ಧಮನ ಕಡಿಮೆಯಾಗಿಲ್ಲ ಎಂದು ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಹೇಳಿದೆ.ಇಂದಿಗೂ ನಮ್ಮ ದೇಶದಲ್ಲಿ ಕಾರ್ಮಿಕರ ಕಲ್ಯಾಣ ನಿಧಿಗಳು ಅದರ ಉದ್ದೇಶದ ಪ್ರಕಾರ ಬಳಕೆಯಾಗುತ್ತಿಲ್ಲ.ಇಂದಿನ  ಆಡಳಿತ ಸರಕಾರಗಳು ಮಾಲಿಕರ ಪರವಾಗಿವೆಯೇ ಹೊರತು ಕಾರ್ಮಿಕರ ಪರವಾಗಿಲ್ಲ.  ಈ ಬಾರಿ ಕೊರೊನದ ಲಾಕ್ ಡೌನ್ ನಿಂದಾಗಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು, ಅವರ ವೇತನ ಕಡಿತಗೊಳಿಸಬಾರದು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದ ಎರಡೇ ದಿವಸದಲ್ಲಿ ಸರಕಾರ ಆದೇಶವನ್ನು ಹಿಂಪಡೆದಿರುವುದರಿಂದಲೇ ತಿಳಿಯುತ್ತದೆ ಸರಕಾರವು ಮಾಲಿಕರ ಗುಲಾಮರಾಗಿದೆ ಎಂದು ಎಫ್‌ಐಟಿಯು ರಾಜ್ಯಾಧ್ಯಕ್ಷ ಅಡ್ವೊಕೇಟ್ ಅಬ್ದುಸ್ಸಲಾಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವರು, ಹಲವಾರು ಕಾರ್ಮಿಕರ ಪರ ಕಾನೂನುಗಳನ್ನು ಆಡಳಿತ ಸರಕಾರವು ತಿದ್ದುಪಡಿ ಮಾಡಿ ಮಾಲಿಕರ ಪರವಾಗಿಸಿದೆ.  ಒಟ್ಟಿನಲ್ಲಿ ಆಡಳಿತ ಸರಕಾರಗಳು ಕಾರ್ಮಿಕರನ್ನು ನಯವಾಗಿ ವಂಚಿಸಿ ಮಾಲಿಕರನ್ನು ಸಂತೃಪ್ತಿ ಪಡಿಸುತ್ತಿದೆ.  ಈ ನಿಟ್ಟಿನಲ್ಲಿ ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಕರ್ನಾಟಕ ಸರಕಾರದೊಂದಿಗೆ ಕೆಲವೊಂದು ಬೇಡಿಕೆಗಳನ್ನು ಇಡುತ್ತಿದೆ.ಈ ಬೇಡಿಕೆಗಳನ್ನು ಸರಕಾರವು ಖಂಡಿತವಾಗಿಯೂ ಪೂರೈಸಬೇಕು ಮಾತ್ರವಲ್ಲ ಯಾವುದೇ ಕಾರಣಕ್ಕೂ ನಿರಾಕರಿಸಬಾರದು ಎಂದು ಒತ್ತಾಯಿಸಿದ್ದಾರೆ.
ಕಾರ್ಮಿಕರ ಸಾಮಾಜಿಕ ಭದ್ರತಾ ಪಧ್ಧತಿ ಕೊನೆಗೊಳಿಸುವ ತೀರ್ಮಾನವನ್ನು ಹಿಂಪಡೆಯಬೇಕು. ಕೆಲಸದ ಸಮಯವನ್ನು 12 ಗಂಟೆಯಾಗಿ ಹೆಚ್ಚಿಸುವ ತೀರ್ಮಾನವನ್ನು ಕೈಬಿಡಬೇಕು. ಕೊರೊನದಿಂದಾಗಿ ಸಂಭವಿಸಿದ ಆರ್ಥಿಕ ಕುಸಿತವನ್ನು ಸರಿದೂಗಿಸಲು ಕಾರ್ಮಿಕರ ತಲೆಯ ಮೇಲೆ ಅದನ್ನು ಹೊರಿಸಬಾರದು. ರಾಜ್ಯದ ಎಲ್ಲಾ ವಲಸೆ ಕಾರ್ಮಿಕರಿಗೆ ಉಚಿತ ರೇಶನ್ ಮತ್ತು ಹಣಕಾಸಿನ ನೆರವು ಖಾತ್ರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾಂಕ್ರಾಮಿಕ ರೋಗದ ಮರೆಯಲ್ಲಿ ಜನರನ್ನು ಪರಸ್ಪರ ಎತ್ತಿಕಟ್ಟುವ ಕೋಮುವಾದಿಗಳನ್ನು ನಿಯಂತ್ರಣದಲ್ಲಿರಿಸಬೇಕು. ಪ್ರಜಾಪ್ರಭುತ್ವದ ಅವಕಾಶ ಮತ್ತು  ಕಾರ್ಮಿಕರ ಅವಕಾಶವನ್ನು ಮುಗಿಸುವ ಕುತಂತ್ರ ಸರಕಾರ ಮಾಡಬಾರದು. ದೇಶದ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಹಣಕಾಸು ಸುರಕ್ಷತೆ ನೀಡಬೇಕು. ರೈತರ, ಕೃಷಿಕರ ಮತ್ತು ಸಣ್ಣವ್ಯಾಪಾರಿಗಳ ಎಲ್ಲಾ ಸಾಲವನ್ನು ಭೇಷರತ್ ಮನ್ನಾ ಮಾಡಬೇಕು. ಬಂಡವಾಳಶಾಹಿಗಳಿಗೆ ಮತ್ತು ಅಗರ್ಭ ಶ್ರೀಮಂತರಿಗೆ ಪ್ರತ್ಯೇಕ ತೆರಿಗೆ ನಿಯಮ ಜಾರಿಗೆ ತಂದು ಆರ್ಥಿಕ ಕುಸಿತವನ್ನು ಸರಿದೂಗಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.