ಕಲಬುರಗಿ, ಏ.21,ರಾಜ್ಯದಲ್ಲಿ ನಡೆಯುತ್ತಿರುವ ಕೊರೊನಾ ಶಂಕಿತರ ವೈದ್ಯಕೀಯ ಪರೀಕ್ಷಾ ವರದಿ ಮೊದಲು ದೆಹಲಿಗೆ ಏಕೆ ನೀಡಲಾಗುತ್ತಿದೆ ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.ಕೊರೊನಾ ವೈರಸ್ ಕುರಿತು ಯುಎನ್ಐ ಕನ್ನಡ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶಾಸಕರು, ಕೊರೊನಾ ಶಂಕಿತರ ವೈದ್ಯಕೀಯ ಪರೀಕ್ಷಾ ವರದಿ ರಾಜ್ಯ ಸರ್ಕಾರಕ್ಕೆ ಮೊದಲು ನೀಡದೆ, ದೆಹಲಿಯ ಐಸಿಎಂಆರ್ ಗೆ ಕಳುಹಿಸಿಕೊಡಲಾಗುತ್ತಿದೆ. ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಬೇಕು ಎಂದು ಅವರು ಆಗ್ರಹಿಸಿದರು.ಈಗಾಗಲೇ ಜಿಲ್ಲೆಯಲ್ಲಿನ ಕೋವಿಡ್-19 ಸಮಸ್ಯೆ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದಲ್ಲದೇ, ವೈಯಕ್ತಿಕವಾಗಿ ಭೇಟಿ ಆಗಿದ್ದೇನೆ. ಟೆಸ್ಟ್ ಲ್ಯಾಬ್ ನಲ್ಲಿ ಆಗುತ್ತಿರುವ ಟೆಸ್ಟಿಂಗ್ ವರದಿ ನೇರವಾಗಿ ರಾಜ್ಯ ಸರ್ಕಾರಕ್ಕೆ ತಲುಪುತ್ತಿಲ್ಲ. ಬದಲಾಗಿ ದೆಹಲಿಯ ಐಸಿಎಂಆರ್ ಗೆ ಕಳುಹಿಸಿಕೊಡಲಾಗುತ್ತಿದೆ. ವಾಡಿಯಲ್ಲಿನ 2 ವರ್ಷದ ಮಗುವಿಗೆ ಕೊರೊನಾ ಸೋಂಕು ಇರುವುದು ತಮಗೆ ಮೊದಲೇ ತಿಳಿದಿತ್ತು. ಆದರೆ, ರಾಜ್ಯ ಸರ್ಕಾರ 24 ಗಂಟೆಗಳ ನಂತರ ಅದನ್ನು ದೃಢಪಡಿಸಿದೆ. ವೈದ್ಯಕೀಯ ವರದಿ ನೇರವಾಗಿ ದೆಹಲಿಗೆ ಹೋಗುತ್ತಿರುವುದರಿಂದ ರಾಜ್ಯ ಸರ್ಕಾರಕ್ಕೆ ಮಾಹಿತಿ ವಿಳಂಬವಾಗುತ್ತಿದೆ ಎಂದು ಅವರು ಆರೋಪಿಸಿದರು.ಪ್ರತಿ ದಿನ 16ರಿಂದ 20 ಕೋವಿಡ್-19 ಪರೀಕ್ಷೆ ಮಾಡಿದರೇ ಸಾಲದು, ಕನಿಷ್ಠ ಪಕ್ಷ 90 ಜನ ಶಂಕಿತರನ್ನು ವೈದ್ಯಕೀಯ ಪರೀಕ್ಷೆಗೆಒಳಪಡಿಸಿದಾಗ ಮಾತ್ರ ಕೊರೊನಾ ಬಹುಬೇಗನೆ ನಿಯಂತ್ರಿಸಲು ಸಾಧ್ಯ. ವೈದ್ಯಕೀಯ ವರದಿ ಎದುರಿಗಿರದೇ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ. ಹೀಗಾಗಿ ಹೆಚ್ಚು ಹೆಚ್ಚು ಟೆಸ್ಟ್ ಆದಾಗ, ಸೋಂಕು ಇದ್ದವರಿಗೆ ಬೇಗನೇ ಗುಣಮುಖಪಡಿಸುವ ಮೂಲಕ ನಿಯಂತ್ರಿಸಬಹುದು ಎಂದರು.ಕೊರೊನಾ ಒಂದು ಕಣ್ಣಿಗೆ ಕಾಣದ ಭಯಂಕರ ವೈರಸ್ ಆಗಿದ್ದು, ಈಗಾಗಲೇ ಮಾಧ್ಯಮ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಧಿಕ ಅರಿವು ಮೂಡಿಸಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಜನರಲ್ಲೂ ಜಾಗೃತಿ ಮೂಡಿದೆ. ಆದರೂ, ಲಾಕ್ ಡೌನ್ ನಿಯಮವನ್ನು ಗಾಳಿಗೆ ತೂರಿ ದೇವಸ್ಥಾನಗಳಲ್ಲಿ ರಥೋತ್ಸವ ಜರುಗುತ್ತಿವೆ. ಇದು ಕೊರೊನಾ ಬಗ್ಗೆ ಅರಿವಿಲ್ಲದೇ ಜರುಗುತ್ತಿರುವುದಲ್ಲ.
ಅವರ ನಿರ್ಲಕ್ಷ್ಯ ದಿಂದ ಜರುಗುತ್ತಿದ್ದು, ಇದಕ್ಕೆ ದೇವಸ್ಥಾನದ ಸಮಿತಿಯೇ ನೇರಹೊಣೆ ಎಂದು ಅವರು ಅಸಮಾಧಾನ ಹೊರಹಾಕಿದರು. ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ 2 ವರ್ಷದ ಮಗುವಿನಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಗಾಗಲೇ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು, ದಿನ ಬಳಕೆಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ.ಸದ್ಯ ಬರಗಾಲವಿದ್ದು, ಬೇಸಿಗೆ ಕಾಲವಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಇತ್ತೀಚೆಗೆ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ಕೋವಿಡ್-19 ರಕ್ಷಕರಿಗೆ ರಕ್ಷಣೆ ಇಲ್ಲದಂತಾಗಿದೆ. ಸಿಬ್ಬಂದಿಗೆ ರಕ್ಷಣೆ ನೀಡುವುದು ಸರ್ಕಾರದ ಕೆಲಸ. ಹಲ್ಲೆ ಮಾಡಿದವರೂ ಯಾರೇ ಆಗಿರಲಿ. ಅಂತಹವರನ್ನು ಯಾವುದೇ ಮುಲಾಜಿಲ್ಲದೇ ಜೈಲಿಗೆ ಅಟ್ಟಬೇಕು ಎಂದು ಅವರು ಕಿಡಿಕಾರಿದರು.ಕೊರೊನಾ ಜಾತಿ, ಧರ್ಮ, ಪಕ್ಷ ನೋಡಿ ಬರುವುದಿಲ್ಲ. ಈ ವಿಷಯದಲ್ಲಿ ಯಾರೂ ಸಹಕಾರ ನೀಡುವುದಲ್ಲವೋ ಅಂತಹವರನ್ನು ತಾವು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರುಜನರು ಕೂಡ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಮನವಿ ಮಾಡಿದರು.ಕಲ್ಯಾಣ ಕರ್ನಾಟಕ ಎಂದು ರಾಜ್ಯ ಸರ್ಕಾರ ಕೇವಲ ನಾಮಕರಣ ಮಾಡಿದೆ ಹೊರತಾಗಿ, ಕಲ್ಯಾಣಗೋಸ್ಕರ ಏನು ಮಾಡುತ್ತಿಲ್ಲ.
ನಮ್ಮ ಭಾಗದ ಜನರೊಬ್ಬರು ಇಂದು ಉಸ್ತುವಾರಿ ಸಚಿವರಾಗಿದ್ದರೇ, ಸದ್ಯ ಜಿಲ್ಲೆ ಇಂತಹ ನಿರ್ಲಕ್ಷ್ಯ ಕ್ಕೆ ಒಳಗಾಗುತ್ತಿರಲಿಲ್ಲ. ಬೇರೆ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ನೀಡಿರುವುದರಿಂದ ಹೇಳೋರು ಇಲ್ಲ. ಕೇಳೋರು ಇಲ್ಲ ಎಂಬಂತೆ ಸ್ಥಿತಿ ಉದ್ಭವವಾಗಿದೆ. ಪ್ರಭು ಚವ್ಹಾಣ್ ಅವರಿಗೆ ಮಂತ್ರಿಸ್ಥಾನ ನೀಡಿದ್ದಾರೆ. ಅವರಿಗೆ ಕನ್ನಡವು ಮಾತನಾಡುವುದಕ್ಕೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.ತಾವು 2 ಬಾರಿ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಮಾಜಿ ವೈದ್ಯಕೀಯ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹಾಗೂ ಇಎಸ್ ಐ ಆಸ್ಪತ್ರೆ ಕಟ್ಟಿಸಿರುವ ತಮ್ಮ ತಂದೆ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರು ಕೂಡ ಇಲ್ಲಿಯೇ ಇದ್ದಾರೆ. ಆದರೂ, ಇದೂವರೆಗೂ ಯಾರೂ ಕೂಡ ತಮ್ಮ ಅನುಭವ ಕೇಳಿಲ್ಲ. ಅಲ್ಲದೇ, ಯಾವೊಂದು ವಿಡಿಯೋ ಕಾನ್ಫರೆನ್ಸ್ ಕೂಡ ಆಹ್ವಾನ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿರು. ತಾವೇನು ಸಹಕರಿಸುವುದಿಲ್ಲ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.ಸರ್ಕಾರದಲ್ಲಿ ಕೋವಿಡ್-19 ಕುರಿತು ಯಾವುದೇ ಗಾಂಭೀರ್ಯತೆ ಇಲ್ಲ. ಈ ಮೊದಲು ಬಿ.ಶ್ರೀರಾಮುಲು ಅವರಿಗೆ ಕೋವಿಡ್ ಉಸ್ತುವಾರಿ ನೀಡಲಾಗಿತ್ತು. ನಂತರ ಡಾ. ಕೆ ಸುಧಾಕರ್ ಅವರಿಗೆ ನೀಡಲಾಯಿತು. ಇದೀಗ ಟಾಸ್ಕ್ ಫೊರ್ಸ್ ನಲ್ಲಿ ಸದಸ್ಯರಲ್ಲದ ಸುರೇಶ್ ಕುಮಾರ್ ಅವರು ಹೆಲ್ತ್ ಬುಲೆಟೆನ್ ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ವಿಷಯದಲ್ಲಿ ಗಂಭೀರವಾಗಿದೆ ಎಂದು ತಮಗೆ ಅನಿಸುವುದಿಲ್ಲ ಎಂದು ಆರೋಪಿಸಿದರು.ಇದುವರೆಗೆ ತಾವು ತಮ್ಮ ಖರ್ಚಿನಲ್ಲಿ 15 ಸಾವಿರ ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಸರ್ ನೀಡಿದ್ದೇನೆ ಎಂದು ತಿಳಿಸಿದರು.